"ಅಥ್ಲೀಟ್‌, ಕೋಚ್‌ ಹೊಣೆಗಾರರು...": ವಿನೇಶ್ ಫೋಗಟ್ ಅನರ್ಹತೆ ಪ್ರಕರಣದಲ್ಲಿ ಭಾರತೀಯ ಒಲಿಂಪಿಕ್ ಸಮಿತಿಯ ವೈದ್ಯಕೀಯ ತಂಡವನ್ನು ದೂಷಿಸಬಾರದು ಎಂದ ಪಿ.ಟಿ. ಉಷಾ

Update: 2024-08-12 06:39 GMT

ವಿನೇಶ್ ಫೋಗಟ್ ಮತ್ತು ಪಿ.ಟಿ. ಉಷಾ (Photo: PTI)

ಹೊಸದಿಲ್ಲಿ: ವಿನೇಶ್ ಫೋಗಟ್ ಅನರ್ಹತೆ ಪ್ರಕರಣದಲ್ಲಿ ಭಾರತೀಯ ಒಲಿಂಪಿಕ್ ಸಮಿತಿಯ ವೈದ್ಯಕೀಯ ತಂಡವನ್ನು ಸಮರ್ಥಿಸಿಕೊಂಡಿರುವ ಭಾರತೀಯ ಒಲಿಂಪಿಕ್ ಸಮಿತಿಯ ಮುಖ್ಯಸ್ಥೆ ಪಿ.ಟಿ.ಉಷಾ, ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ವಿನೇಶ್ ಫೋಗಟ್ 50 ಕೆಜಿ ಕುಸ್ತಿ ವಿಭಾಗದ ಫೈನಲ್‌ನಿಂದ ಅನರ್ಹಗೊಂಡಿದ್ದಕ್ಕೆ ಭಾರತೀಯ ಒಲಿಂಪಿಕ್ ಸಮಿತಿ ನೇಮಿಸಿದ್ದ ಮುಖ್ಯ ವೈದ್ಯಾಧಿಕಾರಿ ಡಾ. ದಿನ್ಶಾ ಪಾರ್ದಿವಾಲಾರನ್ನು ದೂಷಿಸಬಾರದು ಎಂದು ಮನವಿ ಮಾಡಿದ್ದಾರೆ. ಅದರ ಬದಲು ಈ ಜವಾಬ್ದಾರಿಯು ವಿನೇಶ್ ಫೋಗಟ್‌ರ ತರಬೇತುದಾರ ಹಾಗೂ ನೆರವು ಸಿಬ್ಬಂದಿಗಳದ್ದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ಸಂಬಂಧ ರವಿವಾರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಭಾರತೀಯ ಒಲಿಂಪಿಕ್ ಸಮಿತಿ, ಕುಸ್ತಿ, ವೇಟ್ ಲಿಫ್ಟಿಂಗ್, ಬಾಕ್ಸಿಂಗ್ ಹಾಗೂ ಜೂಡೊದಂತಹ ತೂಕ ನಿರ್ವಹಣೆ ಕ್ರೀಡೆಗಳಲ್ಲಿ ಅವುಗಳ ಸಂಪೂರ್ಣ ಜವಾಬ್ದಾರಿ ಸಂಬಂಧಿಸಿದ ಅಥ್ಲೀಟ್‌ಗಳು ಹಾಗೂ ಅವರ ವೈಯಕ್ತಿಕ ತರಬೇತು ತಂಡದ ಮೇಲೆ ಇರುತ್ತದೆ ಎಂದು ಒತ್ತಿ ಹೇಳಿದೆ.

ಈ ಕ್ರೀಡೆಗಳಲ್ಲಿ ಅಗತ್ಯವಿರುವ ತೂಕದ ಪ್ರವರ್ಗ ನಿಯಮಗಳಿಗೆ ಸರಿ ಹೊಂದುವುದು ಆಯಾ ಅಥ್ಲೀಟ್‌ಗಳು ಹಾಗೂ ಅವರ ತರಬೇತುದಾರರದ್ದಾಗಿರುತ್ತದೆ ಎಂದು ಭಾರತೀಯ ಒಲಿಂಪಿಕ್ ಸಮಿತಿ ಸ್ಪಷ್ಟಪಡಿಸಿದೆ ಎಂದು IANS ಸುದ್ದಿ ಸಂಸ್ಥೆ ವರದಿ ಮಾಡಿದೆ.

ಒಲಿಂಪಿಕ್ಸ್ ಕ್ರೀಡಾಕೂಟ ಪ್ರಾರಂಭವಾಗುವುದಕ್ಕೂ ಹಲವು ತಿಂಗಳ ಮುನ್ನವೇ ಡಾ ದಿನ್ಶಾ ಪಾರ್ದಿವಾಲಾ ಹಾಗೂ ಅವರ ತಂಡವನ್ನು ನೇಮಕ ಮಾಡಲಾಗಿತ್ತು ಎಂದು ಪಿ.ಟಿ.ಉಷಾ ವಿವರಿಸಿದ್ದಾರೆ. ಡಾ. ಪಾರ್ದಿವಾಲಾರ ತಂಡದ ಪ್ರಮುಖ ಜವಾಬ್ದಾರಿಯು ಅಥ್ಲೀಟ್‌ಗಳು ಪಾಲ್ಗೊಳ್ಳುವ ತಮ್ಮ ತಮ್ಮ ಸ್ಪರ್ಧೆಗಳಲ್ಲಿ ಅವರ ಚೇತರಿಕೆಗೆ ನೆರವು ನೀಡುವುದು ಹಾಗೂ ಒಂದು ವೇಳೆ ಗಾಯಗೊಂಡರೆ, ಅದನ್ನು ನಿರ್ವಹಿಸುವುದಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News