ಮಹಾರಾಷ್ಟ್ರ | ಕೊಲ್ಹಾಪುರದ ದಲಿತರ ಮನೆಯಲ್ಲಿ ಅಡುಗೆ ಮಾಡಿ ಊಟ ಬಡಿಸಿದ ʼಶೆಫ್ʼ ರಾಹುಲ್ ಗಾಂಧಿ

Update: 2024-10-07 13:39 GMT

ರಾಹುಲ್ ಗಾಂಧಿ | PC : X \ @RahulGandhi

ಕೊಲ್ಹಾಪುರ : ಮಹಾರಾಷ್ಟ್ರದ ಕೊಲ್ಹಾಪುರದ ಹೊರವಲಯದಲ್ಲಿರುವ ಹಳ್ಳಿಯೊಂದರಲ್ಲಿ ದಲಿತ ಕುಟುಂಬದ ಮನೆಗೆ ಶನಿವಾರ ರಾಹುಲ್ ಗಾಂಧಿ ಅಚ್ಚರಿಯ ಭೇಟಿ ನೀಡಿದ್ದರು. ಅವರೊಂದಿಗೆ ಕೂತು ಮಾತಾನಾಡಿದ ರಾಹುಲ್ ಹಸಿವಾಗುತ್ತದೆ ಎಂದು ಹೇಳಿ ಅಡುಗೆ ಮನೆಗೆ ಹೋಗಿ ಸ್ವತಃ ಅಡುಗೆ ಮಾಡಿದರು.

ದಲಿತ ಆಹಾರ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಇಲ್ಲಿಗೆ ಬಂದಿದ್ದೇನೆ ಎಂದ ವಿಪಕ್ಷ ನಾಯಕ, ಆ ಕುಟುಂಬದೊಂದಿಗೆ ಬೆರೆತು ಜೊತೆಯಾಗಿಯೇ ಆಹಾರ ತಯಾರಿಸಿದರು. ಅವರೊಂದಿಗೆ ಕುಳಿತು ಊಟ ಮಾಡಿದರು.

ಕೊಲ್ಹಾಪುರಕ್ಕೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ರಾಹುಲ್ ಗಾಂಧಿ ಅವರು ರಾಜ್ಯ ಕಾಂಗ್ರೆಸ್‌ನ ಪ್ರಮುಖರು ಮತ್ತು ಭದ್ರತೆಯೊಂದಿಗೆ ನೇರವಾಗಿ 50,000 ಜನಸಂಖ್ಯೆಯನ್ನು ಹೊಂದಿರುವ ಉಂಚಗಾಂವ್ ಗ್ರಾಮಕ್ಕೆ ತೆರಳಿದರು. ಮಾಹಿತಿ ನೀಡದೇ ಅವರು ಅಜಯ್ ಕುಮಾರ್ ಸಾನಡೆ ಅವರ ಮನೆಗೆ ಹೋದರು. ರಾಹುಲ್ ಗಾಂಧಿ ನೋಡುತ್ತಿದ್ದಂತೆ ಸಾನಡೆ ಅವರ ಪತ್ನಿ ಅಂಜನಾಗೆ ಅಚ್ಚರಿ ಕಾದಿತ್ತು. ಅವರು ಒಂದು ಕ್ಷಣ ಅವಕ್ಕಾದರು.

ಸಾನಡೆ ಕುಟುಂಬವು ಮನೆಗೆ ಬಂದ ಅತಿಥಿಗೆ ಏನು ಕೊಡುವುದು ಎಂದು ಯೋಚಿಸುತ್ತಿದ್ದಂತೆ, ರಾಹುಲ್ ಗಾಂಧಿಯವರ ಸರಳ ನಡೆ ಅವರಿಗೆ ಆಪ್ತವೆನಿಸಿತು. ಸುಮಾರು ನಾಲ್ಕು ಚುನಾವಣೆಗಳ ಹಿಂದಿನವರೆಗೆ ನಾವು ಕಾಂಗ್ರೆಸ್ ಗೆ ಮತವೇ ಹಾಕುತ್ತಿರಲಿಲ್ಲ ಎಂದ ಅಜಯ್ ಕುಮಾರ್ ಸಾನಡೆ, ಭಾರತ ಜೋಡೋ ಯಾತ್ರೆಗೆ ನಾವು ಬಂದಿದ್ದೆವು ಎಂದು ರಾಹುಲ್ ಗಾಂಧಿ ಜೊತೆ ಆತ್ಮೀಯವಾಗಿ ಮಾತನಾಡಿದರು.

ಹಸಿವಾಗುತ್ತಿರುವಂತೆ ರಾಹುಲ್ ಅವರು ನಾನು ಏನಾದರೂ ತಿನ್ನಲು ಇಷ್ಟಪಡುತ್ತೇನೆ ಎಂದರು. ಅಜಯ್ ಕುಮಾರ್ ಸಾನಡೆ ಅವರು ಏನು ತಿನ್ನಲು ಇಷ್ಟಪಡುತ್ತಾರೆ ಎಂದು ಕೇಳಲು ಪ್ರಯತ್ನಿಸಿದರು. ಆದರೆ ಕಾಂಗ್ರೆಸ್ ನಾಯಕ, "ಚಿಂತಿಸಬೇಡಿ, ನಾನೇ ನೋಡುತ್ತೇನೆ. ನಮ್ಮೆಲ್ಲರಿಗೂ ಏನನ್ನಾದರೂ ಸಿದ್ಧಪಡಿಸುತ್ತೇನೆ!" ಎಂದಾಗ ಕುಟುಂಬಕ್ಕೆ ಒಂದು ಕ್ಷಣ ಏನು ಹೇಳಬೇಕೆಂದೇ ತೋಚಲಿಲ್ಲ.

ಸಾನಡೆ ದಂಪತಿಗಳು ರಾಹುಲ್ ಗಾಂಧಿಯವರನ್ನು ಪಕ್ಕದ ಅಡುಗೆಮನೆಗೆ ಕರೆದೊಯ್ದರು. ಅಲ್ಲಿ ಅವರು ಸಣ್ಣ ಫ್ರಿಡ್ಜ್ ಅನ್ನು ತೆರೆದರು. ರಾಹುಲ್ ಗಾಂಧಿ ಸ್ವಲ್ಪ ಈರುಳ್ಳಿ, ಒಂದು ಬಟ್ಟಲು ಬಟಾಣಿ ಮತ್ತು ಕೆಲವು ತಾಜಾ ಬದನೆಗಳನ್ನು ತೆಗೆದುಕೊಂಡು ಗ್ಯಾಸ್ ಸ್ಟೌವ್ ಇರಿಸಲಾಗಿದ್ದ ಸಣ್ಣ ಅಡುಗೆ ಮಾಡುವ ಸ್ಥಳಕ್ಕೆ ತೆರಳಿದರು.

“ರಾಹುಲ್ ಗಾಂಧಿಯವರು ತರಕಾರಿಗಳನ್ನು ಕತ್ತರಿಸಲು ಪ್ರಾರಂಭಿಸಿದರು. ಸ್ಪ್ರಿಂಗ್ ಆನಿಯನ್ಸ್ ಬೇಯಿಸಲು ಪ್ಯಾನ್ ತೆಗೆದುಕೊಂಡರು, ಎಣ್ಣೆ ಸುರಿದರು. ನನಗೆ ತುಂಬಾ ಮುಜುಗರವಾಗತೊಡಗಿತು. ಆದ್ದರಿಂದ, ನಾನು 'ರಾಹುಲ್ ಭಾವು' (ಸಹೋದರ) ಗೆ ನಾನು ಇನ್ನೆರಡು ಭಕ್ಷ್ಯಗಳನ್ನು ಬೇಯಿಸುತ್ತೇನೆ ಎಂದು ಹೇಳಿದೆ. ಅವರು ಸಮ್ಮತಿಸಿದರು. ನಾನು ಅವುಗಳನ್ನು ಕೆಲವು ಹನಿ ಎಣ್ಣೆ, ಉಪ್ಪು ಮತ್ತು ಮಸಾಲೆಗಳೊಂದಿಗೆ ಸಿದ್ಧಪಡಿಸಿದೆ. ನಾನು ನಮ್ಮೆಲ್ಲರಿಗೂ ಸಾಕಷ್ಟು 'ಜೋವರ್ ಭಕ್ರಿ'(ಜೋಳದ ರೊಟ್ಟಿ)ಗಳನ್ನು ತಯಾರಿಸಿದೆ”, ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರೊಂದಿಗೆ ಅಡುಗೆ ಮನೆಯ ಅನುಭವಗಳನ್ನು ಅಂಜನಾ ಹಂಚಿಕೊಂಡರು.

ಬಳಿಕ ಊಟ ಬಡಿಸಿದರು. ರಾಹುಲ್ ಗಾಂಧಿಯವರು ಸಂತೃಪ್ತಿಯಿಂದ ಊಟ ಮಾಡಿದರು. ಕುಟುಂಬದ ಆಗು ಹೋಗುಗಳ ಬಗ್ಗೆ, ಮಕ್ಕಳ ಕೆಲಸ, ವಿದ್ಯಾಭ್ಯಾಸದ ಬಗ್ಗೆ ತಿಳಿದುಕೊಂಡರು.

"ಒಂದು ಗಂಟೆಗೂ ಹೆಚ್ಚು ಕಾಲ ನಮ್ಮೊಂದಿಗೆ ಕಳೆದ ನಂತರ, ಅವರು ನಮಗೆಲ್ಲರಿಗೂ ಹಸ್ತಲಾಘವ ಮಾಡಿ ವಿದಾಯ ಹೇಳಿದರು. ಇತರ ಎಲ್ಲಾ ಕಾಂಗ್ರೆಸ್ ನಾಯಕರು ಮತ್ತು ಭದ್ರತಾ ಸಿಬ್ಬಂದಿಗಳು ನಮಗೆ ತೊಂದರೆಯಾಗದಂತೆ ತಾಳ್ಮೆಯಿಂದ ಹೊರಗೆ ಕಾಯುತ್ತಿದ್ದರು," ಎಂದು ಸಾನಡೆಯವರು ಸಂತಸ ವ್ಯಕ್ತಪಡಿಸಿದರು.

ಸಾನಡೆ ಅವರ ಮನೆಯಿಂದ ಹೊರಡುವಾಗ ರಾಹುಲ್ ಭಾರತೀಯ ಸಂವಿಧಾನದ ಪೀಠಿಕೆಯ ಪ್ರತಿಯನ್ನು ಕುಟುಂಬಕ್ಕೆ ನೀಡಿದರು.

ರಾಹುಲ್ ಗಾಂಧಿಯವರ ದಿಢೀರ್ ಭೇಟಿ, ದಲಿತರ ಮನೆಯಲ್ಲಿ ಕೂತು ಮಾತನಾಡಿದ ಶೈಲಿ, ತಾವೇ ಆಹಾರ ಬೇಯಿಸಿ ಊಟ ಮಾಡಿದ್ದು, ದಲಿತ ಕುಟುಂಬದ ಊಹೆಗೂ ನಿಲುಕದ ಕ್ಷಣವಾಗಿತ್ತು. ರಾಹುಲ್ ಅವರ ಅವಿಸ್ಮರಣೀಯ ಭೇಟಿಯು "ಉಂಚಗಾಂವ್‌ಗೆ ಮತ್ತು ಇಡೀ ಗ್ರಾಮಕ್ಕೆ ಅತ್ಯಂತ ದೊಡ್ಡ ಮತ್ತು ಸ್ಮರಣೀಯ ಗೌರವವಾಗಿದೆ" ಎಂದು ಸಾನಡೆ ಬಣ್ಣಿಸಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News