ರಾಹುಲ್ ಗಾಂಧಿ ಸಮಾವೇಶಗಳು ನನಗೆ ಘಜಿನಿ ಚಿತ್ರವನ್ನು ನೆನಪಿಸುತ್ತವೆ: ದೇವೇಂದ್ರ ಫಡ್ನವಿಸ್ ವ್ಯಂಗ್ಯ
ರಾಯ್ಪುರ: ರಾಹುಲ್ ಗಾಂಧಿಯ ಚುನಾವಣಾ ಸಮಾವೇಶಗಳು ನನಗೆ ಹಿಂದಿ ಚಲನಚಿತ್ರ ‘ಘಜಿನಿ’ಯನ್ನು ನೆನಪಿಸುತ್ತವೆ ಎಂದು ಸೋಮವಾರ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ವ್ಯಂಗ್ಯವಾಡಿದರು. ಆ ಚಿತ್ರದ ಮುಖ್ಯ ಪಾತ್ರವು ಕಿರು ಅವಧಿಯ ನೆನಪಿನ ನಷ್ಟದಿಂದ ಬಳಲುವಂತೆ ರಾಹುಲ್ ಗಾಂಧಿ ಕೂಡಾ 2018ರ ಛತ್ತೀಸ್ ಗಡ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಭರವಸೆಗಳನ್ನು ಮರೆತಿದ್ದಾರೆ ಎಂದು ಅವರು ಆರೋಪಿಸಿದರು ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್, ಅಬಕಾರಿ ಹಗರಣದ ಕಳಂಕಿತ ಹಣವನ್ನು ಚುನಾವಣೆಗಳಿಗೆ ವಿನಿಯೋಗಿಸಲಾಗುತ್ತಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
“ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಕೆಲವು ಚುನಾವಣಾ ಸಮಾವೇಶಗಳನ್ನು ನಾನು ನೋಡಿದ ನಂತರ ನನಗೆ 2008ರ ಘಜಿನಿ ಚಿತ್ರ ನೆನಪಿಗೆ ಬರುತ್ತಿದೆ. ಅವರು ನೆನಪಿನ ನಷ್ಟದಿಂದ ಬಳಲುತ್ತಿದ್ದಾರೆ. ಅವರು 2018ರ ಚುನಾವಣೆಯಲ್ಲಿ ತಾವು ಏನು ಭರವಸೆ ನೀಡಿದ್ದೆವು ಎಂಬುದನ್ನು ಮರೆತಿದ್ದು, ಹೊಸದಾಗಿ ಸುಳ್ಳು ಹೇಳಲು ಪ್ರಾರಂಭಿಸಿದ್ದಾರೆ” ಎಂದು ಫಡ್ನವಿಸ್ ಆರೋಪಿಸಿದರು. .
ಬಘೇಲ್ ಸರ್ಕಾರವು ಮದ್ಯ ಬಾಟಲಿಗಳ ಮೇಲೆ ನಕಲಿ ಹೋಲೊಗ್ರಾಮ್ ಹಾಕಲು ನೆರವು ನೀಡಿದ್ದು, ಅದರಿಂದ ಸಂಪಾದಿಸಿರುವ ರೂ. 2,000 ಕೋಟಿ ಮೊತ್ತವನ್ನು ಈಗ ಚುನಾವಣೆಗಳಲ್ಲಿ ವಿನಿಯೋಗಿಸುತ್ತಿದೆ ಎಂದು ಅವರು ದೂರಿದರು.
ಛತ್ತೀಸ್ ಗಡ ವಿಧಾನಸಭಾ ಚುನಾವಣೆಯು ನ.7 ಮತ್ತು 17ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ಡಿ.3ರಂದು ಫಲಿತಾಂಶ ಪ್ರಕಟವಾಗಲಿದೆ.