ಕೇದಾರನಾಥದಲ್ಲಿ ಬಿಜೆಪಿ ಸಂಸದ ವರುಣ್ ಗಾಂಧಿಯನ್ನು ಭೇಟಿಯಾದ ರಾಹುಲ್ ಗಾಂಧಿ: ವರದಿ
ಹೊಸದಿಲ್ಲಿ: ಕೇದಾರನಾಥ ದೇವಾಲಯಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಅವರ ಚಿಕ್ಕಪ್ಪನ ಪುತ್ರ ಮತ್ತು ಬಿಜೆಪಿ ಸಂಸದ ವರುಣ್ ಗಾಂಧಿ ಮಂಗಳವಾರ ಸಂಕ್ಷಿಪ್ತ ಮಾತುಕತೆ ನಡೆಸಿದರು ಎಂದು ಮೂಲಗಳು ತಿಳಿಸಿವೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಾರ್ವಜನಿಕವಾಗಿ ಒಟ್ಟಿಗೆ ವಿರಳವಾಗಿ ಕಾಣಿಸಿಕೊಳ್ಳುವ ಈ ಇಬ್ಬರು ಸಹೋದರರ ಭೇಟಿಯು ವರುಣ್ ಗಾಂಧಿ ಅವರ ರಾಜಕೀಯ ಭವಿಷ್ಯದ ಕುರಿತು ರಾಜಕೀಯ ವಲಯದಲ್ಲಿ ಊಹಾಪೋಹಗಳನ್ನು ಸೃಷ್ಟಿಸಿದೆ.
ಸಂಜಯ್ ಗಾಂಧಿ ಹಾಗೂ ಮನೇಕಾ ಗಾಂಧಿ ದಂಪತಿಗಳ ಪುತ್ರರಾದ ವರುಣ್ ಗಾಂಧಿ, ಇತ್ತೀಚಿನ ತಿಂಗಳುಗಳಲ್ಲಿ ಬಿಜೆಪಿಯ ಪ್ರಮುಖ ಸಭೆಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹಾಗೆಯೇ ಸದ್ಯ ಹಿಂಪಡೆದಿರುವ ಕೃಷಿ ಕಾನೂನುಗಳು ಸೇರಿದಂತೆ ಹಲವಾರು ಮುಖ್ಯ ವಿಷಯಗಳ ಕುರಿತು ಕೆಲವೊಮ್ಮೆ ತಮ್ಮ ಪಕ್ಷದ ನಿಲುವಿಗಿಂತ ಭಿನ್ನವಾದ ನಿಲುವನ್ನು ವರುಣ್ ಗಾಂಧಿ ಪ್ರದರ್ಶಿಸಿದ್ದಾರೆ.
ಕೇದಾರನಾಥ ದೇವಾಲಯದ ಹಿಂಭಾಗ ಇಬ್ಬರೂ ಭೇಟಿಯಾದರು ಹಾಗೂ ಪರಸ್ಪರ ಶುಭಾಶಯ ಕೋರಿದರು. ಈ ಭೇಟಿಯು ಅಲ್ಪಾವಧಿ ಮತ್ತು ಹಾರ್ದಿಕವಾಗಿತ್ತು ಎಂದು ಮೂಲಗಳು PTI ಸುದ್ದಿ ಸಂಸ್ಥೆಗೆ ತಿಳಿಸಿವೆ.
ವರುಣ್ ಗಾಂಧಿಯವರ ಪುತ್ರಿಯನ್ನು ಭೇಟಿಯಾಗಿದ್ದಕ್ಕೆ ರಾಹುಲ್ ಗಾಂಧಿ ತುಂಬಾ ಹರ್ಷ ವ್ಯಕ್ತಪಡಿಸಿದರು ಎಂದಿರುವ ಮೂಲಗಳು, ಇಬ್ಬರೂ ಸಹೋದರರು ಪರಸ್ಪರ ಭೇಟಿಯಾಗದಿದ್ದರೂ ಉತ್ತಮ ಹಾಗೂ ನಾಗರಿಕ ಸಂಬಂಧಗಳನ್ನು ಕಾದುಕೊಂಡಿದ್ದಾರೆ ಎಂದೂ ತಿಳಿಸಿವೆ.
ಭೇಟಿಯ ಸಂದರ್ಭದಲ್ಲಿ ಯಾವುದೇ ರಾಜಕೀಯ ವಿಷಯ ಚರ್ಚೆಯಾಗಿಲ್ಲ ಎಂದೂ ಮೂಲಗಳು ತಿಳಿಸಿವೆ.
ಕಳೆದ ವರ್ಷ ನಡೆದಿದ್ದ ಪತ್ರಿಕಾಗೋಷ್ಠಿಯೊಂದರಲ್ಲಿ ವರುಣ್ ಗಾಂಧಿಯವರನ್ನು ಕಾಂಗ್ರೆಸ್ ಪಕ್ಷ ಬರ ಮಾಡಿಕೊಳ್ಳುವುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ದ ರಾಹುಲ್ ಗಾಂಧಿ, ಪಕ್ಷಕ್ಕೆ ಯಾರು ಬೇಕಾದರೂ ಬರಬಹುದು. ಆದರೆ, ಕಾಂಗ್ರೆಸ್ ಹೋರಾಡುತ್ತಿರುವ ಆರ್‍ಎಸ್‍ಎಸ್/ಬಿಜೆಪಿ ಸಿದ್ಧಾಂತಗಳನ್ನು ವರುಣ್ ಅಳವಡಿಸಿಕೊಂಡಿದ್ದಾರೆ” ಎಂದು ಸೂಚ್ಯವಾಗಿ ಹೇಳಿದ್ದರು.
ರಾಹುಲ್ ಗಾಂಧಿ ಅವರು ಉತ್ತರಾಖಂಡದಲ್ಲಿನ ಕೇದಾರನಾಥ ದೇವಾಲಯಕ್ಕೆ ಕಳೆದ ಮೂರು ವರ್ಷಗಳಿಂದ ಭೇಟಿ ನೀಡುತ್ತಿದ್ದರೆ, ತಮ್ಮ ಕುಟುಂಬದ ಸದಸ್ಯರೊಂದಿಗೆ ವರುಣ್ ಗಾಂಧಿ ಮಂಗಳವಾರ ಶಿವನಿಗೆ ಮೀಸಲಾದ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದರು.