ಕಲ್ಲಿದ್ದಲು ಗಣಿ ಕಾರ್ಮಿಕರೊಂದಿಗೆ ಸಂವಾದದ ವೀಡಿಯೊ ಹಂಚಿಕೊಂಡ ರಾಹುಲ್ ಗಾಂಧಿ
ಹೊಸದಿಲ್ಲಿ: ತೆಲಂಗಾಣದ ಸಿಂಗರೇಣಿ ಕಲ್ಲಿದ್ದಲು ಗಣಿಗಳ ಕಾರ್ಮಿಕರೊಂದಿಗೆ ತನ್ನ ಇತ್ತೀಚಿನ ಸಂವಾದದ ವೀಡಿಯೊವನ್ನು ಬುಧವಾರ ಹಂಚಿಕೊಂಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಗಣಿಗಳ ಖಾಸಗೀಕರಣದ ಬಗ್ಗೆ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ಅದು ಕಾರ್ಮಿಕ ಕಾನೂನುಗಳ ಉಲ್ಲಂಘನೆಯಾಗಿದೆ ಮತ್ತು ಕಾರ್ಮಿಕರನ್ನು ಜೀತ ಪದ್ಧತಿಗೆ ತಳ್ಳುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಯೂ ಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಅವರು,ಪ್ರಮುಖ ಕ್ಷೇತ್ರಗಳಲ್ಲಿ ಖಾಸಗೀಕರಣಕ್ಕೆ ಅವಕಾಶವಿರಬಾರದು ಎನ್ನುವುದು ಕಾಂಗ್ರೆಸ್ ಪಕ್ಷದ ಸ್ಪಷ್ಟ ನಿಲುವಾಗಿದೆ ಎಂದು ಕಾರ್ಮಿಕರಿಗೆ ತಿಳಿಸಿದ್ದಾರೆ.
‘ಕೆಲವು ದಿನಗಳ ಹಿಂದೆ ಸಿಂಗರೇಣಿ ಕಲ್ಲಿದ್ದಲು ಗಣಿಗಳ ಕಾರ್ಮಿಕರು ಮತ್ತು ಉದ್ಯೋಗಿಗಳನ್ನು ಭೇಟಿಯಾಗಿ ಮಾತುಕತೆ ನಡೆಸುವ ಅವಕಾಶವೊಂದು ನನಗೆ ಲಭಿಸಿತ್ತು. ಅವರ ಸಮಸ್ಯೆಗಳನ್ನು ಕೇಳಿದ ಬಳಿಕ ಗಣಿಗಳ ಖಾಸಗೀಕರಣವೇ ಪ್ರತಿಯೊಂದೂ ಸಮಸ್ಯೆಯ ಮೂಲವಾಗಿದೆ ಎನ್ನುವುದು ನನ್ನ ಅರಿವಿಗೆ ಬಂದಿದೆ ’ ಎಂದು ತಿಳಿಸಿರುವ ರಾಹುಲ್,‘ಖಾಸಗೀಕರಣದಿಂದ ಕೆಲವು ಬಂಡವಾಳಶಾಹಿಗಳು ಲಾಭ ಮಾಡಿಕೊಳ್ಳುತ್ತಾರೆ ಮತ್ತು ಇದರಿಂದಾಗಿ,ನಾನು ಸುದೀರ್ಘ ಕಾಲದಿಂದ ಹೇಳುತ್ತ ಬಂದಿರುವಂತೆ ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುತ್ತಾರೆ ಮತ್ತು ಬಡವರು ಇನ್ನಷ್ಟು ಬಡವರಾಗುತ್ತಾರೆ ’ ಎಂದಿದ್ದಾರೆ.
ಕಳೆದ ತಿಂಗಳು ತನ್ನ ತೆಲಂಗಾಣ ಭೇಟಿ ಸಂದರ್ಭದಲ್ಲಿ ಕಾರ್ಮಿಕರೊಂದಿಗೆ ಮಾತುಕತೆ ನಡೆಸಿದ್ದ ರಾಹುಲ್,ಸಿಂಗರೇಣಿ ಕಲ್ಲಿದ್ದಲ್ಲು ಕ್ಷೇತ್ರದಲ್ಲಿಯ ಗಣಿಗಳ ಖಾಸಗೀಕರಣ ನಡೆಯುವುದಿಲ್ಲ ಎಂದು ಭರವಸೆ ನೀಡಿದ್ದರು. ಅವುಗಳನ್ನು ಅದಾನಿಗೆ ಮಾರಾಟ ಮಾಡಲು ಪ್ರಯತ್ನ ನಡೆದಿತ್ತಾದರೂ ತನ್ನ ಪಕ್ಷವು ಅದನ್ನು ತಡೆದಿತ್ತು ಎಂದು ಅವರು ಆರೋಪಿಸಿದ್ದರು.