ಅನಾರೋಗ್ಯದ ಕಾರಣ ರಾಹುಲ್ ಗಾಂಧಿ ರಾಂಚಿ ಸಮಾವೇಶಕ್ಕೆ ಗೈರಾಗಲಿದ್ದಾರೆ: ಕಾಂಗ್ರೆಸ್
ಹೊಸದಿಲ್ಲಿ: ರವಿವಾರ ರಾಂಚಿಯಲ್ಲಿ ನಡೆಯಲಿರುವ ಇಂಡಿಯಾ ಮೈತ್ರಿಕೂಟದ ಬೃಹತ್ ಸಮಾವೇಶದಲ್ಲಿ ತಮ್ಮ ಅನಾರೋಗ್ಯದ ಕಾರಣಕ್ಕೆ ರಾಹುಲ್ ಗಾಂಧಿ ಭಾಗವಹಿಸುತ್ತಿಲ್ಲ ಎಂದು ಪಕ್ಷದ ನಾಯಕ ಜೈರಾಮ್ ರಮೇಶ್ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, ರಾಹುಲ್ ಗಾಂಧಿ ಸತ್ನಾದಲ್ಲಿನ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು, ರಾಂಚಿಯಲ್ಲಿ ಆಯೋಜಿಸಲಾಗಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಜ್ಜಾಗಿದ್ದರು. ಆದರೆ, ಅವರು ದಿಢೀರನೆ ಅನಾರೋಗ್ಯಕ್ಕೀಡಾಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
“ಇಂದು ಸತ್ನಾದಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು, ರಾಂಚಿಯಲ್ಲಿ ಆಯೋಜಿಸಲಾಗಿರುವ ಇಂಡಿಯಾ ಮೈತ್ರಿಕೂಟದ ಸಮಾವೇಶದಲ್ಲಿ ಭಾಗವಹಿಸಲು ರಾಹುಲ್ ಗಾಂಧಿ ಸಜ್ಜಾಗಿದ್ದರು. ಆದರೆ, ಅವರು ದಿಢೀರನೆ ಅನಾರೋಗ್ಯಕ್ಕಿಡಾಗಿರುವುದರಿಂದ ಸದ್ಯ ದಿಲ್ಲಿಯನ್ನು ತೊರೆಯಲು ಸಾಧ್ಯವಾಗುತ್ತಿಲ್ಲ. ಆದರೆ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸತ್ನಾದಲ್ಲಿನ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡ ನಂತರ ರಾಂಚಿಯಲ್ಲಿ ಆಯೋಜಿಸಲಾಗಿರುವ ಸಮಾವೇಶದಲ್ಲಿ ಖಂಡಿತ ಭಾಗವಹಿಸಲಿದ್ದಾರೆ” ಎಂದೂ ಹೇಳಿದ್ದಾರೆ.
ರಾಂಚಿಯಲ್ಲಿ ಆಯೋಜನೆಗೊಂಡಿರುವ ‘ಉದಯಿಸುತ್ತಿರುವ ನ್ಯಾಯ’ ಸಮಾವೇಶದಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲೂ ಪ್ರಸಾದ್ ಸೇರಿದಂತೆ ಹಲವಾರು ಇಂಡಿಯಾ ಮೈತ್ರಿಕೂಟದ ನಾಯಕರು ಭಾಗವಹಿಸುವ ನಿರೀಕ್ಷೆ ಇದೆ.
ಈ ಸಮಾವೇಶದಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಹಾಗೂ ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಪತ್ನಿ ಕಲ್ಪನಾ ಸೊರೇನ್ ಕೂಡಾ ಭಾಗವಹಿಸಲಿದ್ದಾರೆ.