ತಮ್ಮ ಭಾಷಣದ ಅನೇಕ ಭಾಗಗಳನ್ನು ಕಡತದಿಂದ ತೆಗೆದುಹಾಕಿದ ಕ್ರಮ ಪ್ರಶ್ನಿಸಿ ಸ್ಪೀಕರ್‌ಗೆ ಪತ್ರ ಬರೆದ ರಾಹುಲ್ ಗಾಂಧಿ
ಹೊಸದಿಲ್ಲಿ: ಲೋಕಸಭೆಯಲ್ಲಿ ವಿಪಕ್ಷ ನಾಯಕ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಸೋಮವಾರ ಸಂಸತ್ತಿನಲ್ಲಿ ತಮ್ಮ ಚೊಚ್ಚಲ ಭಾಷಣದಲ್ಲಿ ಹೇಳಿದ ಹಲವು ಮಾತುಗಳನ್ನು ಲೋಕಸಭೆಯ ಕಡತಗಳಿಂದ ತೆಗೆದುಹಾಕುವ ಸ್ಪೀಕರ್ ಓಂ ಬಿರ್ಲಾ ಅವರ ನಿರ್ಧಾರವನ್ನು ಪ್ರಶ್ನಿಸಿ ರಾಹುಲ್ ಅವರಿಗೆ ಪತ್ರ ಬರೆದಿದ್ದಾರೆ.
ಸ್ಪೀಕರ್ ಅವರ ಕ್ರಮ ಸಂಸದೀಯ ಪ್ರಜಾಪ್ರಭುತ್ವದ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂದು ರಾಹುಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ತಮ್ಮ ಮಾತುಗಳ ಉಲ್ಲೇಖಗಳನ್ನು ಕಡತದಿಂದ ತೆಗೆದುಹಾಕಿರುವುದು ತರ್ಕಕ್ಕೆ ನಿಲುಕದ ಕ್ರಮ ಅವುಗಳನ್ನು ಮತ್ತೆ ಕಡತದಲ್ಲಿ ಸೇರ್ಪಡಿಸಬೇಕೆಂದು ರಾಹುಲ್ ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.
ಬಿಜೆಪಿ ಸಂಸದ ಅನುರಾಗ್ ಠಾಕುರ್ ಅವರ ಭಾಷಣ ತುಂಬಾ ಆರೋಪಗಳಿದ್ದರೂ ಅಚ್ಚರಿಯೆಂಬಂತೆ ಕೇವಲ ಒಂದು ಪದವನ್ನು ಕಡತದಿಂದ ತೆಗೆದುಹಾಕಲಾಗಿದೆ ಎಂದು ರಾಹುಲ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸ್ಪೀಕರ್ ಅವರಿಗೆ ಈ ರೀತಿ ಕೆಲವೊಂದು ಮಾತುಗಳನ್ನು ಕಡತದಿಂದ ತೆಗೆದುಹಾಕುವ ಅಧಿಕಾರವಿದ್ದರೂ, ಲೋಕಸಭಾ ನಿಯಮಗಳ ಪುಸ್ತಿಕೆಯಲ್ಲಿ ನಿಯಮ 380 ಅಡಿಯಲ್ಲಿ ಉಲ್ಲೇಖಿಸಲಾದ ಸ್ವರೂಪದ ಮಾತುಗಳನ್ನು ಮಾತ್ರ ಕಡತದಿಂದ ತೆಗೆದುಹಾಕಬಹುದು ಎಂದು ರಾಹುಲ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಆದರೆ ನನ್ನ ಭಾಷಣದ ಹೆಚ್ಚಿನ ಭಾಗಗಳನ್ನು ಕಡತದಿಂದ ತೆಗೆದುಹಾಕಿರುವುದು ಆಘಾತ ಮೂಡಿಸಿದೆ. ಇದು ನಿಯಮ 380 ಅಡಿ ಬರುವುದಿಲ್ಲ. ಸದನದ ಪ್ರತಿಯೊಬ್ಬ ಸದಸ್ಯರು ಸಂವಿಧಾನದ ವಿಧಿ 105(1) ಅನ್ವಯ ವಾಕ್‌ಸ್ವಾತಂತ್ರ್ಯ ಹೊಂದಿದ್ದಾರೆ. ಜನರ ಕಳವಳಗಳನ್ನು ಸಂಸತ್ತಿನಲ್ಲಿ ಎತ್ತುವ ಹಕ್ಕು ಪ್ರತಿಯೊಬ್ಬ ಸದಸ್ಯನಿಗಿದೆ ಎಂದು ರಾಹುಲ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.