ಮೋದಿ ಸೆಲ್ಫೀ ಪಾಯಿಂಟ್‌ ವೆಚ್ಚಗಳ ಕುರಿತು ಆರ್‌ಟಿಐ ಉತ್ತರದ ಬೆನ್ನಲ್ಲೇ ಮಾಹಿತಿ ಹಕ್ಕು ನಿಯಮಗಳನ್ನು ಕಟ್ಟುನಿಟ್ಟುಗೊಳಿಸಿದ ರೈಲ್ವೆ

Update: 2024-01-04 08:32 GMT

Photo credit: freepressjournal.in

ಹೊಸದಿಲ್ಲಿ: ಮಾಹಿತಿ ಹಕ್ಕು ಕಾಯಿದೆ (ಆರ್‌ಟಿಐ) ಅಡಿಯಲ್ಲಿ ಮಾಹಿತಿ ಒದಗಿಸುವ ಕುರಿತಂತೆ ರೈಲ್ವೆ ವಲಯಗಳಿಗೆ ಇರುವ ನಿಯಮಗಳನ್ನು ಭಾರತೀಯ ರೈಲ್ವೆ ಇನ್ನಷ್ಟು ಕಟ್ಟುನಿಟ್ಟುಗೊಳಿಸಿದೆ. ರೈಲು ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ ಮೋದಿ ಚಿತ್ರಗಳಿರುವ ಸೆಲ್ಫೀ ಪಾಯಿಂಟ್‌ಗಳ ವೆಚ್ಚಗಳ ಕುರಿತು ಆರ್‌ಟಿಐ ಮಾಹಿತಿಯ ವಿವಾದದ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಹೊಸ ನಿಯಮಗಳ ಪ್ರಕಾರ ಎಲ್ಲಾ ಆರ್‌ಟಿಐ ಉತ್ತರಗಳನ್ನು ರೈಲ್ವೆ ವಲಯಗಳ ಜನರಲ್‌ ಮ್ಯಾನೇಜರ್‌ಗಳು ಅಥವಾ ವಿಭಾಗೀಯ ರೈಲ್ವೆ ಮ್ಯಾನೇಜರ್‌ಗಳ ಅನುಮೋದನೆಯ ನಂತರವಷ್ಟೇ ಒದಗಿಸಬಹುದಾಗಿದೆ.

ಎಲ್ಲಾ ರೈಲ್ವೆ ವಲಯಗಳ ಜನರಲ್‌ ಮ್ಯಾನೇಜರ್‌ಗಳಿಗೆ ರೈಲ್ವೆ ಮಂಡಳಿಯು ಕಳೆದ ವರ್ಷದ ಡಿಸೆಂಬರ್‌ 28ರಂದು ಸುತ್ತೋಲೆ ಕಳುಹಿಸಿ “ರೈಲ್ವೆ ವಲಯಗಳು ಮತ್ತು ಇತರ ವಿಭಾಗಗಳು ಆರ್‌ಟಿಐ ಅರ್ಜಿಗಳಿಗೆ ನೀಡುವ ಉತ್ತರಗಳ ಗುಣಮಟ್ಟ ಕಡಿಮೆಯಾಗಿದೆ,” ಎಂದು ಹೇಳಲಾಗಿದೆ.

“ಹೆಚ್ಚಿನ ಆರ್‌ಟಿಐ ಅರ್ಜಿಗಳಿಗೆ ಉತ್ತರಗಳನ್ನು ಸಮಯಾವಧಿಯಲ್ಲಿ ಒದಗಿಸಲಾಗಿಲ್ಲ ಇದರಿಂದ ಕೇಂದ್ರ ಮಾಹಿತಿ ಆಯೋಗದ ಮೊದಲ ಅಪೀಲು ಪ್ರಾಧಿಕಾರದ ಮುಂದೆ ಇರುವ ಪ್ರಕರಣಗಳು ಹೆಚ್ಚಾಗಿವೆ, ಇದು ಕೆಲಸದ ಹೊರೆಯನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ ಸಂಸ್ಥೆಗೆ ಕೆಟ್ಟ ಹೆಸರು ತರುತ್ತಿದೆ,” ಎಂದು ಸುತ್ತೋಲೆ ಹೇಳಿದೆ.

“ಸಮಯ ಮಿತಿಯೊಳಗೆ ಎಲ್ಲಾ ಆರ್‌ಟಿಐ ಅರ್ಜಿಗಳನ್ನು ವಿಲೇವಾರಿಗೊಳಿಸಬೇಕು ಹಾಗೂ ಆರ್‌ಟಿಐ ಉತ್ತರಗಳ ಗುಣಮಟ್ಟ ಕಾಪಾಡಲು ಎಲ್ಲಾ ಆರ್‌ಟಿಐ ಅರ್ಜಿಗಳಿಗೆ ಉತ್ತರಗಳನ್ನು ಆಯಾ ರೈಲ್ವೆ ವಲಯದ ಜನರಲ್‌ ಮ್ಯಾನೇಜರ್‌ ಮತ್ತು ವಿಭಾಗೀಯ ರೈಲ್ವೆ ಮ್ಯಾನೇಜರ್ ಅವರ ಅನುಮೋದನೆ ಪಡೆಯಬೇಕು. ಅದೇ ರೀತಿ ಆರ್‌ಟಿಐ ಕಾಯಿದೆಯಡಿ ಮೊದಲ ಅಪೀಲುಗಳಿಗೆ ಉತ್ತರಗಳನ್ನು ಜನರಲ್‌ ಮ್ಯಾನೇಜರ್‌ ಮತ್ತು ವಿಭಾಗೀಯ ರೈಲ್ವೆ ಮ್ಯಾನೇಜರ್‌ ಅವರಿಗೆ ತೋರಿಸಬೇಕು,” ಎಂದು ಸುತ್ತೋಲೆ ತಿಳಿಸಿದೆ.

ಹಲವಾರು ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಲಾಗಿರುವ 3ಡಿ ನರೇಂದ್ರ ಮೋದಿ ಸೆಲ್ಫೀ ಪಾಯಿಂಟ್‌ಗಳಿಗೆ ತಗಲಿದ ವೆಚ್ಚದ ಕುರಿತು ಮಾಹಿತಿಯನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ಸೆಂಟ್ರಲ್‌ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವರಾಜ್‌ ಮನಸ್ಪುರೆ ಅವರನ್ನು ಡಿಸೆಂಬರ್‌ 29ರಂದು ದಿಢೀರ್‌ ವರ್ಗಾಯಿಸಿರುವುದು ಭಾರೀ ಸುದ್ದಿಯಾಗಿತ್ತು. ಅವರು ಈ ಹುದ್ದೆ ವಹಿಸಿ ಕೇವಲ ಏಳು ತಿಂಗಳುಗಳಾಗಿದ್ದವು.

ಅಮರಾವತಿ ಮೂಲದ ಮಾಹಿತಿ ಹಕ್ಕು ಕಾರ್ಯಕರ್ತ ಅಜಯ್‌ ಬೋಸ್‌ ಅವರು ಭಾರತೀಯ ರೈಲ್ವೆಯ 19 ವಲಯಗಳಲ್ಲಿ ಸೇರಿದ ಸೆಂಟ್ರಲ್‌ ರೈಲ್ವೆ ಸಹಿತ ಪಶ್ಚಿಮ ರೈಲ್ವೆ, ದಕ್ಷಿಣ ರೈಲ್ವೆ, ಉತ್ತರ ರೈಲ್ವೆ ಮತ್ತು ವಾಯುವ್ಯ ರೈಲ್ವೆಯಿಂದ ಮೋದಿ ಸೆಲ್ಫೀ ಬೂತ್‌ಗಳ ಬಗ್ಗೆ ಮಾಹಿತಿ ಕೋರಿದ್ದರು. ಈ ಐದು ವಲಯಗಳ ಪೈಕಿ ಸೆಂಟ್ರಲ್‌ ರೈಲ್ವೆ ಮಾತ್ರ ವೆಚ್ಚಗಳ ಮಾಹಿತಿ ನೀಡಿತ್ತು.

ಸೆಂಟ್ರಲ್‌ ರೈಲ್ವೆ ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ 20 “ಖಾಯಂ” ಸೆಲ್ಫೀ ಬೂತ್‌ಗಳನ್ನು ತಲಾ ರೂ 6.25 ಲಕ್ಷ ವೆಚ್ಚದಲ್ಲಿ (ಒಟ್ಟು ರೂ 1.25 ಕೋಟಿ) ಅಳವಡಿಸಲಾಗಿದೆ. ಇನ್ನೂ 32 ತಾತ್ಕಾಲಿಕ ಸೆಲ್ಫೀ ಬೂತ್‌ಗಳನ್ನು ತಲಾ ರೂ 1.25 ಲಕ್ಷ ವೆಚ್ಚದಲ್ಲಿ (ಒಟ್ಟು ರೂ 40 ಲಕ್ಷ) ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News