ತಾಯಿಯ ಸಂಪತ್ತು ಉಳಿಸಲು ರಾಜೀವ ಗಾಂಧಿ ಪಿತ್ರಾರ್ಜಿತ ಕಾನೂನನ್ನು ರದ್ದುಗೊಳಿಸಿದ್ದರು : ಪ್ರಧಾನಿ ಮೋದಿ ಆರೋಪ
ಮೊರೆನಾ (ಮಧ್ಯ ಪ್ರದೇಶ): ಮಾಜಿ ಪ್ರಧಾನಿ ರಾಜೀವ ಗಾಂಧಿಯವರು ತನ್ನ ತಾಯಿಯ ನಿಧನಾನಂತರ ಅವರ ಸಂಪತ್ತು ಸರಕಾರಕ್ಕೆ ಸೇರುವುದನ್ನು ತಪ್ಪಿಸಲು ಪಿತ್ರಾರ್ಜಿತ ತೆರಿಗೆಯನ್ನು ರದ್ದುಗೊಳಿಸಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಆರೋಪಿಸಿದರು.
ಇಲ್ಲಿ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ವಿರುದ್ಧ ತನ್ನ ದಾಳಿಯನ್ನು ತೀವ್ರಗೊಳಿಸಿದ ಮೋದಿ, ಜನರು ಮತ್ತು ಅವರನ್ನು ಲೂಟಿ ಮಾಡುವ ಕಾಂಗ್ರೆಸ್ ಪಕ್ಷದ ಯೋಜನೆಗಳ ನಡುವೆ ತಾನು ಗೋಡೆಯಾಗಿ ನಿಂತಿದ್ದೇನೆ ಎಂದು ಹೇಳಿದರು. ಪಿತ್ರಾರ್ಜಿತ ಕಾನೂನನ್ನು ರದ್ದುಗೊಳಿಸಿ ಅದರ ಲಾಭವನ್ನು ಪಡೆದುಕೊಂಡ ಬಳಿಕ ಕಾಂಗ್ರೆಸ್ ಈಗ ಅದನ್ನು ಮತ್ತೆ ಜನರ ಮೇಲೆ ಹೇರಲು ಬಯಸಿದೆ ಎಂದು ಪ್ರತಿಪಾದಿಸಿದರು.
‘ಕಾಂಗ್ರೆಸ್ ಮಾಡಿದ ಪಾಪಗಳ ಬಗ್ಗೆ ಕಿವಿಗೊಟ್ಟು ಕೇಳಿ. ಕುತೂಹಲಕಾರಿ ವಿಷಯವೊಂದನ್ನು ನಿಮ್ಮ ಮುಂದಿಡಲು ನಾನು ಬಯಸಿದ್ದೇನೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ನಿಧನರಾದಾಗ ಮಕ್ಕಳು ಅವರ ಆಸ್ತಿಗಳನ್ನು ಪಡೆಯಲಿದ್ದರು. ಆದರೆ ಆಗ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಕಾನೂನು ಇತ್ತು. ಆಸ್ತಿ ಮಕ್ಕಳಿಗೆ ವರ್ಗಾವಣೆಯಾಗುವ ಮುನ್ನ ಅದರ ಕೆಲವು ಭಾಗವನ್ನು ಸರಕಾರವು ಪಡೆದುಕೊಳ್ಳುತ್ತಿತ್ತು. ಈ ಬಗ್ಗೆ ಕಾಂಗ್ರೆಸ್ ಕಾನೂನನ್ನು ರೂಪಿಸಿತ್ತು. ಸರಕಾರದ ವಶಕ್ಕೆ ಆಸ್ತಿ ಹೋಗುವುದನ್ನು ತಪ್ಪಿಸಿ ಅದನ್ನು ಉಳಿಸಿಕೊಳ್ಳಲು ಆಗಿನ ಪ್ರಧಾನಿ ರಾಜೀವ್ ಗಾಂಧಿಯವರು ಪಿತ್ರಾರ್ಜಿತ ಕಾನೂನನ್ನು ರದ್ದುಗೊಳಿಸಿದ್ದರು. ನಾಲ್ಕು ತಲೆಮಾರುಗಳಿಗೂ ಅಧಿಕ ಕಾಲ ಸಂಪತ್ತನ್ನು ಗುಡ್ಡೆ ಹಾಕಿದ ಬಳಿಕ ಅವರು ಈಗ ನಿಮ್ಮ ಸಂಪತ್ತನ್ನು ಲೂಟಿ ಮಾಡಲು ಬಯಸಿದ್ದಾರೆ ’ ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಪಿತ್ರಾರ್ಜಿತ ತೆರಿಗೆಯ ಮೂಲಕ ಜನರ ಅರ್ಧಕ್ಕೂ ಹೆಚ್ಚಿನ ಗಳಿಕೆಯನ್ನು ಕಸಿದುಕೊಳ್ಳಲಿದೆ ಎಂದು ಅವರು ಪ್ರತಿಪಾದಿಸಿದರು.
‘ದೇಶಭಕ್ತರು’ ಎಂದು ತಮ್ಮನ್ನು ಕರೆದುಕೊಳ್ಳುವವರು ಜಾತಿ ಗಣತಿಯ ‘ಎಕ್ಸ್-ರೇ’ಗೆ ಹೆದರುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದ ಹಿನ್ನೆಲೆಯಲ್ಲಿ ಮೋದಿ, ಕಾಂಗ್ರೆಸ್ ಜನರ ಆಸ್ತಿಗಳು ಮತ್ತು ಬೆಲೆ ಬಾಳುವ ಸೊತ್ತುಗಳ ‘ಎಕ್ಸ್-ರೇ’ಅನ್ನು ನಡೆಸುವ ಮೂಲಕ ಅವರ ಚಿನ್ನಾಭರಣಗಳು ಮತ್ತು ಸಣ್ಣ ಉಳಿತಾಯಗಳನ್ನು ವಶಪಡಿಸಿಕೊಳ್ಳಲು ಬಯಸಿದೆ ಎಂದು ಹೇಳಿದರು.
ನಾಲ್ಕು ತಲೆಮಾರುಗಳು ತಮಗೆ ದೊರೆತ ಸಂಪತ್ತನ್ನು ಅನುಭವಿಸಿದ ಬಳಿಕ ಈಗ ಕಾಂಗ್ರೆಸ್ ಪಿತ್ರಾರ್ಜಿತ ತೆರಿಗೆಯನ್ನು ಇನ್ನಷ್ಟು ಶಕ್ತಿಶಾಲಿಯಾಗಿ ಮರುಜಾರಿಗೊಳಿಸಲು ಬಯಸಿದೆ ಎಂದು ಮೋದಿ ಆರೋಪಿಸಿದರು.
ಸಂಪತ್ತಿನ ಮರುಹಂಚಿಕೆ ವಿಷಯ ಕುರಿತು ವಿವಾದದ ನಡುವೆ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರ ಹೇಳಿಕೆಯನ್ನು ಬಳಸಿಕೊಂಡ ಮೋದಿ, ಪ್ರತಿಪಕ್ಷದ ‘ಯುವರಾಜ (ರಾಹುಲ್ ಗಾಂಧಿಯವರನ್ನು ಉಲ್ಲೇಖಿಸಿ)’ ಸಲಹೆಗಾರರೋರ್ವರು ಪಿತ್ರಾರ್ಜಿತ ಕಾನೂನಿನ ಹೇರಿಕೆಯ ಬಗ್ಗೆ ಸುಳಿವು ನೀಡಿದ್ದಾರೆ ಎಂದರು. ಬಿಜೆಪಿ ಇರುವವರೆಗೂ ಇಂತಹ ಕುತಂತ್ರಗಳು ಯಶಸ್ವಿಯಾಗಲು ಬಿಡುವುದಿಲ್ಲ ಎಂದು ಅವರು ಹೇಳಿದರು.
ಕಾಂಗ್ರೆಸ್ ನೇತೃತ್ವದ ಸರಕಾರವು ರಚನೆಯಾದರೆ ನೀವು ಕಷ್ಟ ಪಟ್ಟು ದುಡಿದು ಕೂಡಿಟ್ಟಿರುವ ಸಂಪತ್ತನ್ನು ನಿಮ್ಮಿಂದ ಕಿತ್ತುಕೊಳ್ಳಲಾಗುತ್ತದೆ ಎಂದು ಹೇಳಿದ ಪ್ರಧಾನಿ,ನಿಮ್ಮ ಮತ್ತು ನಿಮ್ಮನ್ನು ದೋಚುವ ಕಾಂಗ್ರೆಸ್ನ ಹುನ್ನಾರಗಳ ನಡುವೆ ಮೋದಿ ಗೋಡೆಯಂತೆ ನಿಂತಿದ್ದಾರೆ ಎಂದರು.