AI ಮಿಲಿಟರಿ ಕಾರ್ಯಾಚರಣೆಗಳಲ್ಲಿ ಕ್ರಾಂತಿಯನ್ನುಂಟು ಮಾಡುವ ಸಾಮರ್ಥ್ಯ ಹೊಂದಿದೆ : ರಾಜನಾಥ್ ಸಿಂಗ್

Update: 2024-10-19 16:09 GMT

ರಾಜನಾಥ್ ಸಿಂಗ್ | PTI 

ಹೊಸದಿಲ್ಲಿ : ಕೃತಕ ಬುದ್ಧಿಮತ್ತೆ (AI)ಯು ಮುನ್ಸೂಚಕ ವಿಶ್ಲೇಷಣೆಯಿಂದ ಹಿಡಿದು ಸ್ವಾಯತ್ತ ನಿರ್ಧಾರ ತೆಗೆದುಕೊಳ್ಳುವ ವ್ಯವಸ್ಥೆಯವರೆಗೆ ಮಿಲಿಟರಿ ಕಾರ್ಯಾಚರಣೆಗಳಲ್ಲಿ ಕ್ರಾಂತಿಯನ್ನುಂಟು ಮಾಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಶನಿವಾರ ಇಲ್ಲಿ ಹೇಳಿದರು.

ನ್ಯಾಷನಲ್ ಡಿಫೆನ್ಸ್ ಕಾಲೇಜಿನ 62ನೇ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು AI ಬಗ್ಗೆ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿ, ನೀವಿಗ ನಾಯಕತ್ವದ ಪಾತ್ರವನ್ನು ನಿರ್ವಹಿಸಲಿದ್ದೀರಿ,ಈ ತಂತ್ರಜ್ಞಾನವನ್ನು ಎಲ್ಲಿ ಮತ್ತು ಹೇಗೆ ಬಳಸಿಕೊಳ್ಳಬೇಕು ಎನ್ನುವುದನ್ನು ನೀವು ನಿರ್ಧರಿಸಬೇಕು ಎಂದು ಹೇಳಿದರು.

ಇಂದಿನ ಅಂತರ್‌ ಸಂಪರ್ಕಿತ ಜಗತ್ತಿನಲ್ಲಿ ಭೌಗೋಳಿಕ ರಾಜಕೀಯ, ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಜಾಗತಿಕ ಭದ್ರತಾ ಮೈತ್ರಿಗಳ ಸಂಕೀರ್ಣತೆಗಳ ಬಗ್ಗೆ ದೃಢವಾದ ಅರಿವನ್ನು ಹೊಂದಿರುವುದು ಮಿಲಿಟರಿ ನಾಯಕರಿಗೆ ಅಗತ್ಯವಾಗಿದೆ ಎಂದ ಅವರು, ಮಿಲಿಟರಿ ನಾಯಕರು ತೆಗೆದುಕೊಳ್ಳುವ ನಿರ್ಧಾರಗಳು ಯುದ್ಧಭೂಮಿಯನ್ನು ಮೀರಿ ರಾಜತಾಂತ್ರಿಕತೆ, ಆರ್ಥಿಕತೆ ಮತ್ತು ಅಂತರರಾಷ್ಟ್ರೀಯ ಕಾನೂನು ಕ್ಷೇತ್ರಗಳಲ್ಲಿ ದೂರಗಾಮಿ ಪರಿಣಾಮಗಳನ್ನು ಬೀರಬಹುದು. ಹೀಗಾಗಿ ಈ ಕ್ಷೇತ್ರಗಳಲ್ಲಿ ಹೆಚ್ಚಿನ ಕಲಿಕೆಯು ನಿರ್ಣಾಯಕವಾಗಿದೆ ಎಂದು ಹೇಳಿದರು.

‘ನಾವಿಂದು ಹಿಂದೆಂದೂ ಕಾಣದ ಬೆದರಿಕೆಗಳ ಸಮಯದಲ್ಲಿದ್ದೇವೆ ಮತ್ತು ನಮ್ಮ ದೈನಂದಿನ ಬದುಕುಗಳನ್ನು ಆವರಿಸಿಕೊಂಡಿರುವ ಸಾಧನಗಳು ಮತ್ತು ತಂತ್ರಜ್ಞಾನಗಳು ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳಾಗುವ ಸಾಮರ್ಥ್ಯವನ್ನು ಹೊಂದಿವೆ. ಇತ್ತೀಚಿನ ಯಾವ ಘಟನೆಯನ್ನು ನಾನು ಪ್ರಸ್ತಾಪಿಸುತ್ತಿದ್ದೇನೆ ಎಂದು ನೀವೆಲ್ಲರೂ ಊಹಿಸಿದ್ದೀರಿ ಎಂದು ಭಾವಿಸಿದ್ದೇನೆ ’ ಎಂದು ಹಿಜ್ಬುಲ್ಲಾಗಳ ಮೇಲೆ ದಾಳಿ ನಡೆಸಲು ಇಸ್ರೇಲ್ ಅವರ ಪೇಜರ್‌ಗಳನ್ನು ಹ್ಯಾಕ್ ಮಾಡಿದ್ದನ್ನು ಪರೋಕ್ಷವಾಗಿ ಉಲ್ಲೇಖಿಸಿದರು.

‘ನಮ್ಮ ವಿರೋಧಿಗಳು ಈ ಸಾಮರ್ಥ್ಯಗಳನ್ನು ಬಳಸಿಕೊಳ್ಳಬಹುದು ಎಂಬ ಕೇವಲ ಆಲೋಚನೆಯೇ ಇಂತಹ ಸ್ಪಷ್ಟ ಸಾಧ್ಯತೆಗಳಿಗೆ ನಾವು ಸಿದ್ಧರಿರಬೇಕು ಎಂಬ ತುರ್ತ ಅಗತ್ಯವನ್ನು ಜ್ಞಾಪಿಸುತ್ತದೆ ’ ಎಂದು ಸಿಂಗ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News