ಜನವರಿ 22ರವರಗೆ ರಾಜ್ಯ ಸಾರಿಗೆ ಬಸ್ಸುಗಳಲ್ಲಿ ರಾಮ ಭಜನೆ ಹಾಡುಗಳ ಪ್ರಸಾರಕ್ಕೆ ಉತ್ತರ ಪ್ರದೇಶ ಸರಕಾರ ಆದೇಶ

Update: 2024-01-05 07:29 GMT

ಸಾಂದರ್ಭಿಕ ಚಿತ್ರ (PTI)

ಲಕ್ನೋ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನಾ ಕಾರ್ಯಗಳಿಗೆ ಸಿದ್ಧತೆ ಭರದಿಂದ ಸಾಗಿರುವಂತೆಯೇ ರಾಜ್ಯದ ಎಲ್ಲಾ ಉತ್ತರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಲ್ಲಿ ಜನವರಿ 22ರವರೆಗೆ ರಾಮ ಭಜನೆಗಳನ್ನು ಪ್ರಸಾರ ಮಾಡುವಂತೆ ರಾಜ್ಯ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

ನಿಗಮದ ಎಲ್ಲಾ ವಾಹನಗಳಲ್ಲಿ ಹಾಗೂ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡುವ ಜೊತೆಗೆ ಪ್ರಯಾಣಿಕರಿಗೆ ಶ್ರೀ ರಾಮನ ಜೀವನದ ಕುರಿತು ಮಾಹಿತಿ ನೀಡುವ ಭಜನೆಗಳನ್ನು ಬಸ್ಸುಗಳಲ್ಲಿ ಕೇಳಿಸಲು ಸೂಚಿಸಲಾಗಿದೆ.

“ಇದರ ಭಾಗವಾಗಿ ಜನಪ್ರಿಯ ರಾಮ ಭಜನೆಗಳು, ಸ್ಥಳೀಯ ಗಾಯಕರು ಹಾಡಿದ ಭಕ್ತಿ ಗೀತೆಗಳನ್ನೂ ನುಡಿಸಲಾಗುವುದು,” ಎಂದು ಸೂಚನೆ ತಿಳಿಸಿದೆ.

ಬಸ್ಸು ಸಿಬ್ಬಂದಿಗೆ ತರಬೇತಿ ನೀಡಿ ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸುವಂತೆ ನೋಡಿಕೊಳ್ಳಲಾಗುವುದು ಹಾಗೂ ಸಂಚಾರ ನಿಯಮಗಳ ಪಾಲನೆಗೆ ಕ್ರಮಕೈಗೊಳ್ಳಲಾಗುವುದಲ್ಲದೆ ಚಾಲನೆ ವೇಳೆ ಯಾವುದೇ ತಂಬಾಕು ವಸ್ತು ತಿನ್ನದಂತೆ ಹಾಗೂ ಸಮವಸ್ತ್ರ ಕಡ್ಡಾಯವಾಗಿ ಧರಿಸುವಂತೆ ಮತ್ತು ಪ್ರಯಾಣಿಕರಿಂದ ಯಾವುದೇ ಕಾರಣಕ್ಕೆ ಟಿಕೆಟಿಗೆ ಹೆಚ್ಚುವರಿ ಹಣ ಸಂಗ್ರಹಿಸದಂತೆ ಕ್ರಮಕೈಗೊಳ್ಳಲಾಗುವುದು.

ಲಕ್ನೋ-ಅಯ್ಯೋಧ್ಯ, ಗೋರಖಪುರ್-ಅಯೋಧ್ಯೆ ಮತ್ತು ಸುಲ್ತಾನ್‌ಪುರ್-ಅಯ್ಯೋಧ್ಯ ನಡುವೆ ಸಂಚರಿಸುವ ಪ್ರಯಾಣಿಕರಿಗೆ ಸಹಕರಿಸಲು ಎಲ್ಲಾ ಟೋಲ್‌ ಪ್ಲಾಝಾಗಳಲ್ಲಿ ಸಹಾಯ ಡೆಸ್ಕ್‌ ಇರಲಿದೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News