ಅತ್ಯಾಚಾರ ಆರೋಪ : ಹೈಕೋರ್ಟ್ ನಿರ್ದೇಶನದಂತೆ ಕ್ಯಾಡಿಲಾ ಫಾರ್ಮಾದ ಸಿಎಂಡಿ ವಿರುದ್ಧ ಪ್ರಕರಣ ದಾಖಲು
ಅಹ್ಮದಾಬಾದ್: ಕ್ಯಾಡಿಲಾ ಫಾರ್ಮಾಸ್ಯೂಟಿಕಲ್ ನ ಅಧ್ಯಕ್ಷ ಹಾಗೂ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಮೋದಿ ವಿರುದ್ಧ ಗುಜರಾತ್ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
ಕ್ಯಾಡಿಲಾ ಫಾರ್ಮಾಸ್ಯೂಟಿಕಲ್ ಕಂಪೆನಿಗೆ ಫ್ಲೈಟ್ ಅಟಂಡೆಂಟ್ ಆಗಿ ಸೇರಿದ್ದ ಬಲ್ಗೇರಿಯನ್ ಮಹಿಳೆಯೋರ್ವರು ಕ್ಯಾಡಿಲಾ ಫಾರ್ಮಾಸ್ಯೂಟಿಕಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಮೋದಿ ಹಾಗೂ ಕಂಪೆನಿಯ ಓರ್ವ ಉದ್ಯೋಗಿ ವಿರುದ್ಧ ಅತ್ಯಾಚಾರ, ಹಲ್ಲೆ, ಕ್ರಿಮಿನಲ್ ಸಂಚು ಹಾಗೂ ಮಾನವ ಸಾಗಾಟದ ಆರೋಪದಲ್ಲಿ ಎಫ್ಐಆರ್ ದಾಖಲಿಸಲು ನಿರ್ದೇಶಿಸುವಂತೆ ಹಾಗೂ ತನ್ನ ದೂರನ್ನು ದಾಖಲಿಸಿಕೊಳ್ಳದ ಪೊಲೀಸ್ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಗುಜರಾತ್ ಉಚ್ಛ ನ್ಯಾಯಾಲಯದ ಮೆಟಿಲೇರಿದ್ದರು.
ಗುಜರಾತ್ ಉಚ್ಛ ನ್ಯಾಯಾಲಯ ಡಿಸೆಂಬರ್ 22ರಂದು ನೀಡಿದ ತನ್ನ ಆದೇಶದಲ್ಲಿ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿತು. ಅನಂತರ ರಾಜೀವ್ ಮೋದಿ ಹಾಗೂ ಕಂಪೆನಿಯ ಇನ್ನೋರ್ವ ಉದ್ಯೋಗಿ ವಿರುದ್ಧ ನಗರದ ಸೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
‘‘ಗೌರವಾನ್ವಿತ ಗುಜರಾತ್ ಉಚ್ಛ ನ್ಯಾಯಾಲಯ ನೀಡಿದ ನಿರ್ದೇಶನ ಅನುಸರಿಸಿ ಸಂತ್ರಸ್ತೆ ಸಲ್ಲಿಸಿದ ದೂರಿನ ಆಧಾರದಲ್ಲಿ ಕ್ಯಾಡಿಲಾ ಫಾರ್ಮಾಸ್ಯೂಟಿಕಲ್ ಕಂಪೆನಿಯ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ರಾಜೀವ್ ಮೋದಿ, ಕಂಪೆನಿಯ ಉದ್ಯೋಗಿ ಜಾನ್ಸನ್ ಮ್ಯಾಥ್ಯೂ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.