ಅತ್ಯಾಚಾರ, ಹತ್ಯೆ ಪ್ರಕರಣ: ಪ್ರಧಾನಿಗೆ ಮತ್ತೆ ಪತ್ರ ಬರೆದ ಮಮತಾ ಬ್ಯಾನರ್ಜಿ

Update: 2024-08-30 15:45 GMT

ಮಮತಾ ಬ್ಯಾನರ್ಜಿ , ಪ್ರಧಾನಿ ನರೇಂದ್ರ ಮೋದಿ | PC : ANI 

ಹೊಸದಿಲ್ಲಿ: ಕೋಲ್ಕತ್ತಾದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆಯ ಅತ್ಯಾಚಾರ ಹಾಗೂ ಹತ್ಯೆ ಕುರಿತಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಎರಡನೇ ಪತ್ರ ಬರೆದಿದ್ದಾರೆ.

‘‘ಅತ್ಯಾಚಾರದ ಘಟನೆಗಳಿಗೆ ಸಂಬಂಧಿಸಿ ಕಠಿಣ ಕೇಂದ್ರೀಯ ಕಾನೂನು ಹಾಗೂ ಅಂತಹ ಅಪರಾಧ ಎಸಗಿದ ಅಪರಾಧಿಗಳಿಗೆ ಅನುಕರಣೀಯ ಶಿಕ್ಷೆ ವಿಧಿಸುವ ಅಗತ್ಯತೆಗೆ ಕುರಿತಂತೆ 2024 ಆಗಸ್ಟ್ 22ರ ಪತ್ರ ಸಂಖ್ಯೆ 44-ಸಿಎಂ ಅನ್ನು ನೀವು ದಯವಿಟ್ಟು ನೆನಪಿಸಿಕೊಳ್ಳಿ. ಇಂತಹ ಅತಿ ಸೂಕ್ಷ್ಮ ವಿಷಯಗಳಿಗೆ ಸಂಬಂಧಿಸಿ ನಿಮ್ಮಿಂದ ಯಾವುದೇ ಪ್ರತಿಕ್ರಿಯೆ ಸ್ವೀಕರಿಸಿಲ್ಲ’’ ಎಂದು ಮಮತಾ ಬ್ಯಾನರ್ಜಿ ಪತ್ರದಲ್ಲಿ ಹೇಳಿದ್ದಾರೆ.

ಆಗಸ್ಟ್ 22ರಂದು ಬರೆದ ತನ್ನ ಹಿಂದಿನ ಪತ್ರಕ್ಕೆ ಪ್ರಧಾನಿ ಅವರು ನೇರ ಪ್ರತಿಕ್ರಿಯೆ ನೀಡದೇ ಇರುವ ಕುರಿತು ಮಮತಾ ಬ್ಯಾನರ್ಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಪ್ರತಿಕ್ರಿಯೆಗೆ ಬದಲಾಗಿ ಕೇಂದ್ರ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದಿಂದ ಸಾಮಾನ್ಯ ಪ್ರತಿಕ್ರಿಯೆ ಸ್ವೀಕರಿಸಲಾಗಿದೆ. ಆದರೆ, ಈ ಪ್ರಕರಣದ ಗಂಭೀರತೆಯನ್ನು ಗಮನಕ್ಕೆ ತೆಗೆದುಕೊಂಡಾಗ ಅವರ ಪ್ರತಿಕ್ರಿಯೆ ನೀರಸವಾಗಿದೆ ಎಂದು ಅವರು ಹೇಳಿದ್ದಾರೆ.

ಪಶ್ಚಿಮಬಂಗಾಳದಲ್ಲಿ ತನ್ನ ಸರಕಾರ ಈ ಘಟನೆಯ ಕುರಿತಂತೆ ಈಗಾಗಲೇ ಮಹತ್ವದ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಮಮತಾ ಬ್ಯಾನರ್ಜಿ ಅವರ ತನ್ನ ಪತ್ರದಲ್ಲಿ ಗಮನ ಸೆಳೆದಿದ್ದಾರೆ. 88 ತ್ವರಿತ ವಿಚಾರಣಾ ವಿಶೇಷ ನ್ಯಾಯಾಲಯ (ಎಫ್‌ಟಿಎಸ್‌ಸಿ) ಹಾಗೂ 62 ಪೊಕ್ಸೊ ನಿಯೋಜಿತ ನ್ಯಾಯಾಲಯದೊಂದಿಗೆ 10 ವಿಶೇಷ ಪೊಕ್ಸೊ ನ್ಯಾಯಾಲಯಗಳನ್ನು ಆರಂಭಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ. ಮಧ್ಯೆ ಪ್ರವೇಶಿಸುವಂತೆ ಹಾಗೂ ಈ ನ್ಯಾಯಾಲಯಗಳಲ್ಲಿ ಖಾಯಂ ನ್ಯಾಯಾಂಗ ಅಧಿಕಾರಿಗಳನ್ನು ನೇಮಕ ಮಾಡುವಂತೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಗ್ರಹಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಗಸ್ಟ್ 22ರಂದು ಬರೆದ ಪತ್ರದಲ್ಲಿ ಮಮತಾ ಬ್ಯಾನರ್ಜಿ, ದೇಶಾದ್ಯಂತ ದಿನನಿತ್ಯ 90 ಅತ್ಯಾಚಾರಗಳು ನಡೆಯುತ್ತವೆ ಎಂದು ಗಮನ ಸೆಳೆದಿದ್ದಾರೆ.

ಈ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಕೇಂದ್ರ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣ ದೇವಿ, ಕಳೆದ ತಿಂಗಳು ಅನುಷ್ಠಾನಗೊಳಿಸಲಾದ ಭಾರತೀಯ ನ್ಯಾಯ ಸಂಹಿತೆ ಕಠಿಣ ಶಿಕ್ಷೆ ನೀಡುವ ಮೂಲಕ ಮಹಿಳೆಯ ವಿರುದ್ಧದ ಅಪರಾಧಗಳ ಕುರಿತಂತೆ ಸಮಗ್ರ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದಿದ್ದರು.

ಅತ್ಯಾಚಾರ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ನಿರ್ವಹಿಸಲು ಪಶ್ಚಿಮಬಂಗಾಳಕ್ಕೆ 123 ತ್ವರಿತ ವಿಚಾರಣಾ ನ್ಯಾಯಾಲಯಗಳನ್ನು ಮಂಜೂರು ಮಾಡಲಾಗಿದೆ. ಆದರೆ, ಇವುಗಳಲ್ಲಿ ಹೆಚ್ಚಿನ ನ್ಯಾಯಾಲಯಗಳು ಇನ್ನು ಕೂಡ ಕಾರ್ಯಾರಂಭಿಸಿಲ್ಲ ಎಂದು ಅನ್ನಪೂರ್ಣ ದೇವಿ ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News