ಕಳೆದ 10 ವರ್ಷಗಳಲ್ಲಿ ಭಾರತ ನಿಬ್ಬೆರಗಾಗುವಂಥ ಪ್ರಗತಿ ಸಾಧಿಸಿದೆ: ಪ್ರಧಾನಿ ಮೋದಿಯನ್ನು ಶ್ಲಾಘಿಸಿದ ನಟಿ ರಶ್ಮಿಕಾ ಮಂದಣ್ಣ
ಮುಂಬೈ: ಜನವರಿ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದ ಅಟಲ್ ಬಿಹಾರಿ ವಾಜಪೇಯಿ ಸೆವ್ರಿ-ನವ ಶೇವಾ ಅಟಲ್ ಸೇತು ಕುರಿತು ಮಾತನಾಡಿರುವ ನಟಿ ರಶ್ಮಿಕಾ ಮಂದಣ್ಣ, ಮುಂಬೈ ಸಾರಿಗೆ ಜಾಲದ ಮಟ್ಟಿಗೆ ಇದೊಂದು ಕ್ರಾಂತಿಯಾಗಿದೆ ಎಂದು ಪ್ರಶಂಸಿಸಿದ್ದಾರೆ. ಭಾರತದ ಅಭಿವೃದ್ಧಿಯ ನಾಗಲೋಟ ಎಂದಿಗೂ ನಿಲ್ಲುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನೂ ಶ್ಲಾಘಿಸಿದ್ದಾರೆ.
ANI ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ರಶ್ಮಿಕಾ ಮಂದಣ್ಣ, “ನೀವಿದನ್ನು ನಂಬಲೂ ಸಾಧ್ಯವಿಲ್ಲ! ಇಂದು ನವಿ ಮುಂಬೈನಿಂದ ಮುಂಬೈವರೆಗಿನ ಎರಡು ಗಂಟೆಗಳ ಪ್ರಯಾಣವನ್ನು ಕೇವಲ 20 ನಿಮಿಷಗಳಲ್ಲಿ ಮಾಡಬಹುದು. ಈ ರೀತಿಯ ಸಾಧ್ಯತೆಯನ್ನು ಯಾರಾದರೂ ಯೋಚಿಸಿದ್ದರೇ? ಗೋವಾದಿಂದ ಮುಂಬೈವರೆಗೆ, ಬೆಂಗಳೂರಿನಿಂದ ಮುಂಬೈವರೆಗೆ ಎಲ್ಲಿ ನೋಡಿದರೂ ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ವಿಸ್ಮಯಕಾರಿಯಾಗಿ ಬೆಳವಣಿಗೆಯಾಗಿದೆ! ಇದನ್ನು ನೋಡಲು ಹೆಮ್ಮೆಯೆನಿಸುತ್ತದೆ” ಎಂದು ಅಟಲ್ ಸೇತು ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ನನಗಿಸುತ್ತದೆ, ಕನಿಷ್ಠ ಪಕ್ಷ ಈಗ ಭಾರತ ಎಲ್ಲೂ ನಿಲ್ಲುತ್ತಿಲ್ಲ. ದೇಶದ ಅಭಿವೃದ್ಧಿಯನ್ನು ಈಗ ನೋಡಿ. ಕಳೆದ 10 ವರ್ಷಗಳ ಅವಧಿಯಲ್ಲಿ ಈ ದೇಶ ಬೆಳೆದ ರೀತಿ ನಿಬ್ಬೆರಗಾಗಿಸುತ್ತದೆ. ಮೂಲಭೂತ ಸೌಕರ್ಯಗಳು, ದೇಶದ ಅಭಿವೃದ್ಧಿ ಯೋಜನೆಗಳು, ರಸ್ತೆಗಳು ಎಲ್ಲವೂ ಅತ್ಯದ್ಭುತ – ನನಗನಿಸುತ್ತದೆ, ಇದು ನಮ್ಮ ಸಮಯ! ಈ 20 ಕಿ.ಮೀ ರಸ್ತೆ, ಇವೆಲ್ಲವೂ ಬರೀ 7 ವರ್ಷಗಳಲ್ಲಿ ನಿರ್ಮಾಣವಾದವು ಎಂದು ನನಗೆ ಈಗಷ್ಟೇ ಗೊತ್ತಾಯಿತು. ನೋಡಿ ಇದ್ದನ್ನು, ಎಂತಹ ಅದ್ಭುತ! ನಿಜಕ್ಕೂ ನನಗೆ ಮಾತೇ ಬರುತ್ತಿಲ್ಲ. ಭಾರತ ನಿಜವಾಗಿಯೂ ಒಂದು ಸ್ಮಾರ್ಟ್ ದೇಶ ಎಂದಷ್ಟೇ ನಾನು ಹೇಳಬಲ್ಲೆ” ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
“ಯುವ ಭಾರತವು ವೇಗವಾಗಿ ಬೆಳೆಯುತ್ತಿದೆ. ಯುವಕರೀಗ ಹೆಚ್ಚು ಜವಾಬ್ದಾರಿಯುತರಾಗಿದ್ದಾರೆ. ನೀವು ಹೇಳುವ ಯಾವುದರಿಂದಲೂ ಅವರು ಪ್ರಭಾವಿತರಾಗುತ್ತಿಲ್ಲ. ದೇಶವು ಸರಿಯಾದ ದಿಕ್ಕಿನಲ್ಲಿ ಮುನ್ನಡೆಯುತ್ತಿರುವುದನ್ನು ಜನರು ನೋಡುತ್ತಿದ್ದಾರೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.