"ಅತ್ಯಾಚಾರಿಗಳು ಯಾವುದೇ ಧರ್ಮಕ್ಕೆ ಸೇರಿರಬಹುದು ಎಂದಿರುವ ಪ್ರೊಫೆಸರ್ ಅನ್ನು ಕಡ್ಡಾಯ ರಜೆಯಿಂದ ವಾಪಸ್ ಕರೆಯಿರಿ"
ಕೊಲ್ಲಾಪುರ (ಮಹಾರಾಷ್ಟ್ರ): ಅತ್ಯಾಚಾರಿಗಳು ಯಾವುದೇ ಧರ್ಮಕ್ಕೆ ಸೇರಿರಬಹುದು ಎಂದು ಹೇಳಿರುವುದಕ್ಕಾಗಿ ಕಳೆದ ತಿಂಗಳು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದ್ದ ಕೊಲ್ಲಾಪುರದ ಪ್ರೊಫೆಸರ್ ತೇಜಸ್ವಿನಿ ದೇಸಾಯಿಯನ್ನು ವಾಪಸ್ ಕರ್ತವ್ಯಕ್ಕೆ ಕರೆಯಬೇಕು ಎಂದು 88 ಶಿಕ್ಷಣ ತಜ್ಞರ ಗುಂಪೊಂದು ಕಾಲೇಜು ಆಡಳಿತವನ್ನು ಒತ್ತಾಯಿಸಿದೆ.
ಜೂನ್ 7ರಂದು ಕೊಲ್ಲಾಪುರ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ದೇಸಾಯಿ ಚರ್ಚಾಕೂಟವೊಂದನ್ನು ಏರ್ಪಡಿಸಿದ್ದರು. ಆಗ ಕೆಲವು ವಿದ್ಯಾರ್ಥಿಗಳು, ‘‘ಮುಸ್ಲಿಮರು ಅತ್ಯಾಚಾರಿಗಳು, ಅವರು ಮಾಡುವ ಅಪರಾಧಗಳಿಗೆ ಅವರಿಗೆ ಶಿಕ್ಷೆಯಾಗುವುದಿಲ್ಲ’’ ಎಂದು ಹೇಳಿದ್ದರು ಎನ್ನಲಾಗಿದೆ.
‘‘ಹಿಂದೂಗಳು ಯಾವತ್ತೂ ಗಲಭೆಯಲ್ಲಿ ಪಾಲ್ಗೊಂಡಿಲ್ಲ, ಬಾಬರಿ ಮಸೀದಿಯನ್ನು ಸುಪ್ರೀಂ ಕೋರ್ಟ್ನ ಆದೇಶದಂತೆ ಧ್ವಂಸಗೊಳಿಸಲಾಗಿತ್ತು ಎಂದು ಕೆಲವು ವಿದ್ಯಾರ್ಥಿಗಳು ಹೇಳಿದರು’’ ಎಂದು ದೇಸಾಯಿ ‘ನ್ಯೂಸ್ಲಾಂಡ್ರಿ’ಗೆ ಹೇಳಿದ್ದರು. ‘‘ಅದೇ ಚರ್ಚೆಯಲ್ಲಿ ನಾನೂ ಭಾಗವಹಿಸುತ್ತಾ, ಅತ್ಯಾಚಾರವು ಯಾವುದೇ ನಿರ್ದಿಷ್ಟ ಧರ್ಮ ಅಥವಾ ಸಮುದಾಯಕ್ಕೆ ಸೀಮಿತವಾಗಿಲ್ಲ ಎಂದು ಹೇಳಿದೆ. ಅತ್ಯಾಚಾರಿಗಳಿಗೆ ಯಾವುದೇ ಧರ್ಮ ಅಥವಾ ಜಾತಿಯಿಲ್ಲ. ಅದು ಹೀನ ಅಪರಾಧಗಳ ಸಾಲಿಗೆ ಸೇರುತ್ತದೆ ಎಂದು ನಾನು ಹೇಳಿದೆ’’ ಎಂದು ಅವರು ಹೇಳಿದ್ದರು.
‘‘ಪಾಟೀಲ್ಗಳು ಮತ್ತು ದೇಶ್ಮುಖ್ಗಳು ಸೇರಿದಂತೆ ಪ್ರಭಾವಿ ಜನರು ಅತ್ಯಾಚಾರ ಆರೋಪವನ್ನು ಎದುರಿಸುತ್ತಿದ್ದಾರೆ’’ ಎಂದು ಅವರು ಹೇಳಿದ್ದರು. ಕೆಲವು ವಿದ್ಯಾರ್ಥಿಗಳು ಆ ಚರ್ಚೆಯನ್ನು ರೆಕಾರ್ಡ್ ಮಾಡಿಕೊಂಡು ‘‘ಔರಂಗಜೇಬ್ ಒಳ್ಳೆಯವ, ಪಾಟೀಲ್ ಮತ್ತು ದೇಶ್ಮುಖ್ಗಳು ಅತ್ಯಾಚಾರಿಗಳು’’ ಎಂದು ದೇಸಾಯಿ ಹೇಳುವಂತೆ ಕಾಣುವಂತೆ ತಿದ್ದಿದ್ದರು. ಆ ವೀಡಿಯೊ ವೈರಲ್ ಆದ ಬಳಿಕ, ಕಾಲೇಜಿನ ಆಡಳಿತವು, ರಜೆಯಲ್ಲಿ ಹೋಗುವಂತೆ ದೇಸಾಯಿಗೆ ಸೂಚಿಸಿತ್ತು.
‘‘ಅತ್ಯಾಚಾರಿಗಳು ಯಾವುದೇ ಸಮುದಾಯಕ್ಕೆ ಸೇರಿದವರಾಗಿರಬಹುದು’’ ಎಂದು ಅವರು ಹೇಳಿದ್ದಾರ ಎನ್ನುವುದು ಪತ್ರಿಕೆಗಳ ವರದಿಗಳನ್ನು ಓದಿದಾಗ ತಕ್ಷಣ ಗೊತ್ತಾಗುತ್ತದೆ. ಅವರು ಹೇಳಿರುವುದನ್ನು ರೆಕಾರ್ಡ್ ಮಾಡಿಕೊಂಡು, ತಿದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗಿದೆ’’ ಎಂದು ತಮ್ಮ ಹೇಳಿಕೆಯಲ್ಲಿ ಶಿಕ್ಷಣ ತಜ್ಞರು ಹೇಳಿದ್ದಾರೆ.
ದೇಸಾಯಿಗೆ ಕೆಲಸಕ್ಕೆ ಮರಳಲು ಅವಕಾಶ ಕೊಡಿ ಮತ್ತು ಅವರಿಗೆ ರಕ್ಷಣೆ ಕೊಡಿ ಎಂದು ಅವರು ಕಾಲೇಜು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.