ಕೆಂಪು ಸಮುದ್ರದ ಬಿಕ್ಕಟ್ಟಿನಿಂದ ಭಾರತದ ಮೇಲೆ ಹಣದುಬ್ಬರ ಒತ್ತಡವಾಗುವ ಸಾಧ್ಯತೆ
ಹೊಸದಿಲ್ಲಿ: ಇಸ್ರೇಲ್-ಫೆಲೆಸ್ತೀನ್ ಸಮೀಪವಿರುವ ತೈಲ ರಫ್ತು ರಾಷ್ಟ್ರಗಳು ತೈಲೋತ್ಪಾದನೆ ಹಾಗೂ ಪೂರೈಕೆಯನ್ನು ಇಸ್ರೇಲ್-ಹಮಾಸ್ ನಡುವಿನ ಯುದ್ಧದ ಹೊರತಾಗಿಯೂ ಉಳಿದ ಜಗತ್ತಿಗೆ ಯಾವುದೇ ತೊಂದರೆಯಾಗದಂತೆ ಪೂರೈಸುತ್ತಿದೆ. ಇದರಿಂದಾಗಿ ಇಸ್ರೇಲ್-ಹಮಾಸ್ ನಡುವಿನ ಯುದ್ಧದಿಂದ ಜಾಗತಿಕ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಉಂಟಾಗಬಹುದು ಎಂಬ ಕಳವಳಗಳು ದೂರವಾಗಿತ್ತು. ತೈಲೋತ್ಪಾದನೆಯನ್ನು ಒಪೆಕ್ ಪ್ಲಸ್ ಕಡಿತಗೊಳಿಸಿದ ಹೊರತಾಗಿಯೂ ತೈಲ ಬೆಲೆ ಕುಸಿಯಲಾರಂಭಿಸಿತ್ತು. ಆದರೆ, ಯೆಮೆನ್ ಮೂಲದ ಹೌತಿ ಬಂಡುಕೋರರು ಕೆಂಪು ಸಮುದ್ರದ ಮೂಲಕ ಹಾದು ಹೋಗುವ ವಾಣಿಜ್ಯ ಹಡಗುಗಳ ಮೇಲೆ ದಾಳಿ ಪ್ರಾರಂಭಿಸಿರುವುದರಿಂದ ಇಸ್ರೇಲ್-ಹಮಾಸ್ ನಡುವಿನ ಯುದ್ಧದ ಪ್ರತಿಕೂಲ ಪರಿಣಾಮಗಳು ಇತ್ತೀಚಿನ ದಿನಗಳಲ್ಲಿ ತ್ವರಿತವಾಗಿ ಕಾಣಿಸಿಕೊಳ್ಳಲು ಪ್ರಾರಂಭಿಸಿವೆ. ಸೂಯೆಝ್ ಕಾಲುವೆಯ ಮೂಲಕ ನಿರ್ಮಾಣವಾಗಿರುವ ಒಳ ಹಾದಿಯ ಮೂಲಕ ಈ ಹಡಗುಗಳು ಪ್ರಯಾಣಿಸುತ್ತವೆ. ಈ ಮಾರ್ಗದ ಮೂಲಕ ಶೇ. 34ರಷ್ಟು ಜಾಗತಿಕ ಕಂಟೈನರ್ ವಹಿವಾಟು ಹಾಗೂ ಶೇ. 9ರಷ್ಟು ತೈಲ ರಫ್ತು ಹಾದು ಹೋಗುವುದನ್ನು ಗಮನಕ್ಕೆ ತೆಗೆದುಕೊಂಡರೆ ಈ ಬೆಳವಣಿಗೆಯ ಪ್ರತಿಕೂಲ ಪರಿಣಾಮವನ್ನು ಗ್ರಹಿಸಬಹುದಾಗಿದೆ.
ಸರಕು ಸಾಗಣೆ ಹಡಗುಗಳ ಮೇಲೆ ಡ್ರೋನ್ ದಾಳಿ ನಡೆದದ್ದು ಭಾರತದಲ್ಲಿ ಮುಖಪುಟದ ಸುದ್ದಿಯಾದ ನಂತರ ಇಲ್ಲಿಯವರೆಗೆ ಈ ಬಿಕ್ಕಟ್ಟು ನಮ್ಮ ಸುದ್ದಿ ಮಾಧ್ಯಮಗಳಲ್ಲಿ ತಲೆ ಬರಹದ ಸುದ್ದಿಯಾಗಿಲ್ಲ. ಡ್ರೋನ್ ದಾಳಿಗೀಡಾದ ಹಡಗಿನ ಪೈಕಿ ಒಂದು ಹಡಗು ಪೆಟ್ರೋಕೆಮಿಕಲ್ ಅನ್ನು ಒಯ್ಯುತ್ತಿದ್ದರೆ, ಮತ್ತೊಂದು ತೈಲ ಟ್ಯಾಂಕರ್ ಅನ್ನು ಹೊತ್ತೊಯ್ಯುತ್ತಿತ್ತು. ಈ ಪೈಕಿ ಮೊದಲ ದಾಳಿಯು ಇರಾನ್ ನಿಂದ ನಡೆದಿದ್ದರೆ, ಎರಡನೆಯ ದಾಳಿಯು ಯೆಮೆನ್ ಮೂಲದ ಹೌತಿ ಬಂಡುಕೋರರಿಂದ ನಡೆದಿದೆ ಎಂದು ಅಮೆರಿಕಾ ಕೇಂದ್ರ ನಿಯಂತ್ರಣ ಸಂಸ್ಥೆಯು ಘೋಷಿಸಿದೆ. ಈ ಘಟನೆಗಳಿಂದಾಗಿ, ಡ್ರೋನ್ ದಾಳಿಯಿಂದ ಅತ್ಯಗತ್ಯ ಆಮದುಗಳು ವ್ಯತ್ಯಯವಾಗಲಿವೆ ಎಂಬುದು ಸ್ಪಷ್ಟವಾಗಿದೆ. ಈ ಪರಿಸ್ಥಿತಿಯು ಸಂಕೀರ್ಣ ಆಯಾಮವನ್ನು ಸೃಷ್ಟಿಸಿದ್ದು, ಇದರಿಂದ ಅತ್ಯಗತ್ಯ ಉತ್ಪನ್ನಗಳ ಮೇಲೆ ದುಷ್ಪರಿಣಾಮವಾಗಲಿದ್ದು, ಭಾರತದ ಇಂಧನ ಭದ್ರತೆಗೂ ಭಾರಿ ಧಕ್ಕೆಯನ್ನುಂಟು ಮಾಡುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ, ಯೆಮೆನ್ ನ ದೊಡ್ಡ ಭಾಗವನ್ನು ಹೌತಿ ಬಂಡುಕೋರರು ನಿಯಂತ್ರಿಸುತ್ತಿದ್ದು, ಇಸ್ರೇಲ್-ಹಮಾಸ್ ನಡುವಿನ ಬಿಕ್ಕಟ್ಟಿನಲ್ಲಿ ಹಮಾಸ್ ಗೆ ನೆರವು ನೀಡಲು ಇರಾನ್ ಬೆಂಬಲ ನೀಡುತ್ತಿದೆ. ಡಿಸೆಂಬರ್ ಮಧ‍್ಯಭಾಗದಿಂದ ಇಲ್ಲಿಯವರೆಗೆ ಇಂತಹ 15 ದಾಳಿಗಳು ನಡೆದಿದ್ದು, ಜಾಗತಿಕ ಹಡಗು ಮಾರ್ಗವು ಕೇಪ್ ಆಫ್ ಗುಡ್ ಹೋಪ್ ನಿಂದ ತುಂಬಾ ದೂರದ ಹಾಗೂ ತೀರಾ ದುಬಾರಿಯಾದ ಮಾರ್ಗಗಳ ಮೂಲಕ ಸಾಗುವಂತಾಗಿದೆ. ಇದರಿಂದಾಗಿ ವಿಶೇಷ ಸರಕು ಉಪ ಕರದೊಂದಿಗೆ ಭಾರಿ ಮೊತ್ತದ ವಿಮೆಯನ್ನು ಈ ಮಾರ್ಗದಲ್ಲಿ ಸಂಚರಿಸುತ್ತಿರುವ ಹಡಗುಗಳ ಮೇಲೆ ಹೇರಲಾಗುತ್ತಿದೆ. ಒಂದು ವೇಳೆ ಈ ಪರಿಸ್ಥಿತಿ ಆದಷ್ಟೂ ಶೀಘ್ರ ಬಗೆಹರಿಯದಿದ್ದರೆ ಅತ್ಯಂತ ದೂರ ಕ್ರಮಿಸಬೇಕಾದ ಹಾದಿಯ ಮೇಲಿನ ವೆಚ್ಚ ಹಾಗೂ ಭಾರಿ ಪ್ರಮಾಣದ ಶುಲ್ಕಗಳಿಂದಾಗಿ ಜಾಗತಿಕ ಆರ್ಥಿಕತೆಯ ಮೇಲೆ ಹಣದುಬ್ಬರದ ಒತ್ತಡ ಉಂಟಾಗಲಿದೆ.
ಈ ಹಂತದಲ್ಲಿ ಅಮೆರಿಕಾ ನೌಕಾಪಡೆಯು ಮಧ್ಯಪ್ರವೇಶಿಸಿದ್ದು, ಹಡಗುಗಳ ಮೇಲೆ ದಾಳಿ ನಡೆಯುತ್ತಿರುವ ಯೆಮೆನ್ ಮತ್ತು ಎರ್ಟ್ರಿಯ ನಡುವಿನ ಕಿರಿದಾದ ಕಾಲುವೆಯಾದ ಬಾಬ್ ಎಲ್ ಮಂದೇಬ್ ಸ್ಟ್ರೈಟ್ ಮೂಲಕ ಹಾದು ಹೋಗುವ ಹಡಗುಗಳಿಗೆ ಸಶಸ್ತ್ರ ರಕ್ಷಣೆ ಒದಗಿಸಲು ಹಲವಾರು ದೇಶಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ. ಈ ಕಾರ್ಯಾಚರಣೆಗೆ Operation Proseperity Guardian ಎಂದು ಹೆಸರಿಸಲಾಗಿದ್ದು, ಮೈತ್ರಿ ಏರ್ಪಟ್ಟಿರುವುದರಿಂದ ಸೂಯೆಝ್ ಕಾಲುವೆ ಮೂಲಕ ಹಡಗುಗಳ ಸಾಗಣೆ ಪ್ರಾರಂಭವಾಗುವ ವಿಶ್ವಾಸ ಮೂಡಿದೆ. ಈ ಭರವಸೆಯ ಮೇಲೆ ಬಹು ದೊಡ್ಡ ಸರಕು ಸಾಗಣೆ ಸಂಸ್ಥೆಯಾದ ಮೇರ್ಸ್ಕ್ ಆಫ್ ಡೆನ್ಮಾರ್ಕ್ ಕೆಂಪು ಸಮುದ್ರದ ಮೂಲಕ ತನ್ನ ಸಾಗಣೆಯನ್ನು ಪುನಾರಂಭಿಸಲು ನಿರ್ಧರಿಸಿದೆ. ಈ ಮೈತ್ರಿಕೂಟವನ್ನು ಅಮೆರಿಕಾ ಸೇನಾ ಪಡೆಗಳು ವಹಿಸಿಕೊಂಡಿರುವುದರಿಂದ ಕೆಲವು ದೇಶಗಳು Operation Proseperity Guardianನಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದರೂ ಈ ನಿರ್ಧಾರ ಕೈಗೊಂಡಿದೆ.
ರಷ್ಯಾ ಮತ್ತು ಚೀನಾಗೆ ಸಂಬಂಧಿಸಿದ ಹಡಗುಗಳ ಮೇಲೆ ಹೌತಿ ಬಂಡುಕೋರರು ದಾಳಿ ನಡೆಸದಿರುವುದು ಭಾರತದ ಪಾಲಿಗೆ ಗಮನಾರ್ಹ ಸಂಗತಿಯಾಗಿದೆ. ರಷ್ಯಾ ಪೂರೈಸುತ್ತಿರುವ ತೈಲವು ಎಲ್ಲಿಯವರೆಗೆ ವ್ಯತ್ಯಯವಾಗುವುದಿಲ್ಲವೊ ಅಲ್ಲಿಯವರೆಗೆ ಇದು ಸಹಕಾರಿಯೇ ಆಗಲಿದೆ. ಇದರೊಂದಿಗೆ, ಪ್ರಮುಖ ಪಶ್ಚಿಮ ಏಷ್ಯಾ ತೈಲ ಉತ್ಪಾದಕರ ತೈಲವು ದೊಡ್ಡ ಮಟ್ಟದಲ್ಲಿ ಪರ್ಷಿಯನ್ ಕೊಲ್ಲಿಯ ಮೂಲಕ ಸಾಗಣೆಯಾಗುತ್ತದೆ. ಇದೇ ವೇಳೆ, ಕಚ್ಚಾ ತೈಲ ಸಾಗಿಸುತ್ತಿದ್ದ ಒಂದು ಹಡಗಿನ ಮೇಲೆ ಡ್ರೋನ್ ಒಂದು ಅಪ್ಪಳಿಸಿರುವುದರಿಂದ ಇದರ ಬಗ್ಗೆ ನಿರಾಳ ಭಾವ ತಳೆಯುವಂತಿಲ್ಲ ಎಂಬುದನ್ನೂ ಸೂಚಿಸುತ್ತಿದೆ.
ಕೆಂಪು ಸಮುದ್ರದ ಬಿಕ್ಕಟ್ಟಿನ ಬೆನ್ನಿಗೇ ತೈಲ ಬೆಲೆಗಳೂ ಕೂಡಾ ಏರಿಕೆಯಾಗುತ್ತಿವೆ. ಈ ಏರಿಕೆಯು ಗಮನಾರ್ಹವಲ್ಲದಿದ್ದರೂ, ಒಂದು ವೇಳೆ ಈ ಸಮಸ್ಯೆ ಕೊನೆಯಾಗದಿದ್ದರೆ ಮಾರುಕಟ್ಟೆಯು ಮತ್ತಷ್ಟು ಕಠೋರವಾಗಲಿದೆ.
ಮತ್ತೊಂದು ಪ್ರಮುಖ ಕಳವಳವೆಂದರೆ, ಅಮೆರಿಕಾ ಮತ್ತು ಯೂರೋಪ್ ನ ಪ್ರಮುಖ ಮಾರುಕಟ್ಟೆಗಳಿಗೆ ನಡೆಯುತ್ತಿರುವ ರಫ್ತಿನ ಹಣೆಬರಹ. ಇನ್ನೂ ಸ್ವಲ್ಪ ಸಮಯ ದೊಡ್ಡ ಪ್ರಮಾಣದ ಸರಕು ಶುಲ್ಕ ಹಾಗೂ ವಿಮಾ ಶುಲ್ಕಗಳು ಮುಂದುವರಿದರೆ, ಅದರಿಂದ ಭಾರತೀಯ ಸರಕುಗಳು ಮತ್ತಷ್ಟು ದುಬಾರಿಯಾಗಲಿವೆ. ಸೂಯೆಝ್ ಕಾಲುವೆಯ ಮೂಲಕ ರಫ್ತಾಗುತ್ತಿರುವ ಸರಕುಗಳ ಪ್ರಮಾಣವು ಸುಮಾರು 200 ಬಿಲಿಯನ್ ಡಾಲರ್ ಆಗಿದೆ. ಇದರಿಂದಾಗಿ, ಬಾಸ್ಮತಿ ಅಕ್ಕಿ, ಹಲವಾರು ಶ್ರೇಣಿಯ ಉತ್ಪಾದನಾ ಉತ್ಪನಗಳು ಸೇರಿದಂತೆ ಕೃಷಿ ಉತ್ಪನ್ನಗಳ ಮೇಲೆ ಭಾರಿ ದುಷ್ಪರಿಣಾಮ ಉಂಟಾಗಲಿದೆ. ಈ ಸಮಸ್ಯೆಯೊಂದಿಗೆ, ಕಳೆದ ಕೆಲವು ವರ್ಷಗಳಿಂದ ಸೊಮಾಲಿಯಾ ಕಡಲುಗಳ್ಳರಿಂದ ಭಾರತೀಯ ಮತ್ಸ್ಯೋದ್ಯಮವು ಎದುರಿಸುತ್ತಿರುವ ಸಮಸ್ಯೆಯೂ ಸೇರ್ಪಡೆಯಾಗಲಿದೆ.
ಹಮಾಸ್ ಗೆ ನೆರವು ನೀಡುತ್ತಿದ್ದಾರೆ ಎಂದು ಪರಿಗಣಿಸಿದರೂ, ಹೌತಿ ಬಂಡುಕೋರರನ್ನು ನಿಭಾಯಿಸಲು ಯಾವುದೇ ಬಗೆಯ ಸುಲಭ ಪರಿಹಾರವಿಲ್ಲ. ಇದಕ್ಕಿರುವ ದೃಢ ಪರಿಹಾರವೆಂದರೆ, ಜಗತ್ತಿನ ಬಹುತೇಕ ದೇಶಗಳು ಬಯಸುತ್ತಿರುವಂತೆ ಒತ್ತೆಯಾಳುಗಳಾಗಿಸಿಕೊಳ್ಳುವುದನ್ನು ಸ್ಥಗಿತಗೊಳಿಸುವುದು. ಒಂದು ವೇಳೆ ಪಶ್ಚಿಮ ಏಷ್ಯಾದ ಯುದ್ಧ ಮುಂದುವರಿದರೆ, ಜಾಗತಿಕ ಆರ್ಥಿಕತೆಗೆ ಅದರಿಂದ ದುಷ್ಪರಿಣಾಮ ಉಂಟಾಗಲಿದೆ. ಇದರೊಂದಿಗೆ ಕಳೆದ ವರ್ಷ ಎದುರುಗೊಂಡಿರುವ ಉಕ್ರೇನ್ ಯುದ್ಧದಿಂದ ಈಗಾಗಲೇ ಭೌಗೋಳಿಕ ರಾಜಕೀಯ ಬಿಕ್ಕಟ್ಟಿನ ಪರಿಣಾಮವನ್ನೂ ಜಗತ್ತು ಎದುರಿಸುತ್ತಿದೆ.
ಮುಂದೆ ಬರುತ್ತಿರುವ ಬೇರೆ ಆರ್ಥಿಕತೆಗಳಿಗೆ ಹೋಲಿಸಿದರೆ ಇಲ್ಲಿಯವರೆಗೆ ಭಾರತದ ಆರ್ಥಿಕತೆಯು ದೃಢವಾಗಿದೆ. ಆದರೆ, ಕೆಂಪು ಸಮುದ್ರದ ಬಿಕ್ಕಟ್ಟನ್ನು ಎಷ್ಟು ಬೇಗ ಸಾಧ್ಯವೊ ಅಷ್ಟು ಬೇಗ ಬಗೆಹರಿಸಲು ಸಾಧ‍್ಯವಾಗದೆ ಹೋದರೆ, ಹೊಸ ಹಣದುಬ್ಬರ ಒತ್ತಡಗಳು ಹಾಗೂ ಅತ್ಯಗತ್ಯ ಸರಕುಗಳ ಭಾರಿ ಕೊರತೆಯನ್ನು ಎದುರಿಸುವುದು ಅದರ ಪಾಲಿಗೆ ಕ್ಲಿಷ್ಟಕರವಾಗಲಿದೆ.
ಸೌಜನ್ಯ: deccanherald.com