ಸಾಮಾಜಿಕ ವ್ಯವಸ್ಥೆಯಲ್ಲಿನ ವಿಭಜಕ ಪ್ರವೃತ್ತಿಗಳನ್ನು ತಿರಸ್ಕರಿಸಿ : 78 ನೇ ಸ್ವಾತಂತ್ರ್ಯೋತ್ಸವದ ಮುನ್ನಾದಿನ ದೇಶವನ್ನುದ್ದೇಶಿಸಿ ರಾಷ್ಟ್ರಪತಿ ಮುರ್ಮು ಭಾಷಣ

Update: 2024-08-14 16:34 GMT

ದ್ರೌಪದಿ ಮುರ್ಮು | PTI

ಹೊಸದಿಲ್ಲಿ : ಗ್ರಹಿಕೆಯ ಸಾಮಾಜಿಕ ವ್ಯವಸ್ಥೆಗಳಲ್ಲಿ ಅಳವಾಗಿ ಬೇರೂರಿರುವ ವಿಭಜನವಾದಿ ಪ್ರವೃತ್ತಿಗಳನ್ನು ತಿರಸ್ಕರಿಸಿರುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ. ದೇಶದಲ್ಲಿ ರಾಜಕೀಯ ಪ್ರಜಾಪ್ರಭುತ್ವವು ಸ್ಥಿರವಾದ ಪ್ರಗತಿಯನ್ನು ಕಾಣುತ್ತಿರುವ ಜೊತೆಗೆ ಸಾಮಾಜಿಕ ಪ್ರಜಾಪ್ರಭುತ್ವವೂ ಮುನ್ನಡೆಯತ್ತ ಸಾಗುತ್ತಿರುವ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.

78ನೇ ಸ್ವಾತಂತ್ರ್ಯ ದಿನದ ಮುನ್ನಾ ದಿನವಾದ ಬುಧವಾರ ದೇಶವನ್ನುದ್ದೇಶಿಸಿ ಮಾತನಾಡಿದ ಮುರ್ಮು ಅವರು ವೈವಿಧ್ಯತೆ ಹಾಗೂ ಬಹುತ್ವದೊಂದಿಗೆ ದೇಶವು ಸುಸಂಘಟಿತವಾಗಿ ಅಭಿವೃದ್ಧಿ ಹೊಂದುತ್ತಿದೆ ಎಂದು ಹೇಳಿದರು.

ಸಾಮಾಜಿಕ ನ್ಯಾಯವು ನರೇಂದ್ರ ಮೋದಿ ಸರಕಾರದ ಮೊದಲ ಆದ್ಯತೆಯಾಗಿದೆ. ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಹಾಗೂ ಇತರ ಕಡೆಗಣಿಸಲ್ಪಟ್ಟ ಸಮುದಾಯಗಳ ಕಲ್ಯಾಣಕ್ಕಾಗಿ ಅಭೂತಪೂರ್ವ ಕಾರ್ಯಕ್ರಮಗಳನ್ನು ಅದು ಜಾರಿಗೊಳಿಸಿದೆ ಎಂದು ರಾಷ್ಟ್ರಪತಿ ಹೇಳಿದರು.

ರೈತರನ್ನು ಅನ್ನದಾತರೆಂದು ಬಣ್ಣಿಸಿದ ರಾಷ್ಟ್ರಪತಿ, ಭಾರತೀಯ ಕೃಷಿ ಕ್ಷೇತ್ರವು ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಅವರು ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. ರಸ್ತೆಗಳು, ರೈಲ್ವೆ ಹಾಗೂ ಬಂದರುಗಳು ಸೇರಿದಂತೆ ದೇಶದ ಮೂಲಸೌಕರ್ಯಗಳ ನಿರ್ಮಾಣದಲ್ಲಿ ಗಣನೀಯ ಸುಧಾರಣೆಯಾಗಿರುವುದಾಗಿ ಮುರ್ಮು ತಿಳಿಸಿದರು.

►ರಾಷ್ಟ್ರವಿಭಜನೆಯ ದುರಂತವನ್ನು ಸ್ಮರಿಸಿದ ರಾಷ್ಟ್ರಪತಿ

ರಾಷ್ಟ್ರವಿಭಜನೆ ಕಾಲದ ಭೀಕರ ಮಾನವೀಯ ದುರಂತವನ್ನು ನೆನಪಿಸುವ ‘ವಿಭಜನೆಯ ಭಯಾನಕ ಸ್ಮರಣೆಯ ದಿನ’ (ವಿಭಜನ್ ವಿಭಿಷಕ ದಿವಸ್)ವಾಗಿ ಆಗಸ್ಟ್ 14 ಅನ್ನು ದೇಶವು ಆಚರಿಸುತ್ತಿರುವ ಬಗ್ಗೆಯೂ ರಾಷ್ಟ್ರಪತಿ ತನ್ನ ಭಾಷಣದಲ್ಲಿ ಗಮನಸೆಳೆದರು. ‘‘ನಮ್ಮ ಮಹಾನ್ ರಾಷ್ಟ್ರವು ಒತ್ತಾಯಪೂರ್ವಕವಾಗಿ ವಿಭಜನೆಯಾದಾಗ ಲಕ್ಷಾಂತರ ಜನರು ಪಲಾಯನ ಮಾಡಬೇಕಾಗಿ ಬಂತು ಹಾಗೂ ಹಿಂಸಾಚಾರದಲ್ಲಿ ಅಸಂಖ್ಯಾತ ಜನರು ಜೀವ ಕಳೆದುಕೊಂಡರು. ಸ್ವಾತಂತ್ರ್ಯದಿನಾಚರಣೆಯ ಮುನ್ನಾದಿನದಂದು ಈ ಭೀಕರ ಮಾನವೀಯದುರಂತವನ್ನು ನೆನಪಿಸಿಕೊಳ್ಳುತ್ತಿದ್ದೇವೆ ಹಾಗೂ ಛಿದ್ರಗೊಂಡ ಆ ಕುಟುಂಬಗಳ ಬೆಂಬಲಕ್ಕೆ ನಿಲ್ಲುತ್ತೇವೆ’’ ಎಂದು ಹೇಳಿದರು.

►ರಾಷ್ಟ್ರಪತಿ ಭಾಷಣದ ಹೈಲೈಟ್ಸ್...

►‘‘ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯಿಲ್ಲದೆ ರಾಜಕೀಯ ಪ್ರಭುತ್ವವು ಬಾಳಲಾರದು’’ ಎಂಬ ಭಾರತ ಸಂವಿಧಾನದ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಅಭಿಪ್ರಾಯವನ್ನು ಮುರ್ಮು ತನ್ನ ಭಾಷಣದಲ್ಲಿ ಉಲ್ಲೇಖಿಸಿದರು.

►ವೈವಿಧ್ಯತೆ ಹಾಗೂ ಬಹುತ್ವದೊಂದಿಗೆ ಸುಸಂಘಟಿತ ರಾಷ್ಟ್ರವಾಗಿ ನಾವು ಮುನ್ನಡೆಯಬೇಕಾಗಿದೆ. ಭಾರತದಂತಹ ವಿಶಾಲ ದೇಶದಲ್ಲಿ ಸಾಮಾಜಿಕ ಶ್ರೇಣಿಗಳ ಆಧಾರದಲ್ಲಿ ಅಪಶ್ರುತಿಗಳನ್ನು ಹುಟ್ಟುಹಾಕುವಂತಹ ವಿಭಜಕ ಪ್ರವೃತ್ತಿಗಳನ್ನು ಜನರು ತಿರಸ್ಕರಿಸಬೇಕಾಗಿದೆ ಎಂದವರು ಹೇಳಿದರು.

►ಭಾರತೀಯ ಸಮಾಜದಲ್ಲಿ ಮಹಿಳೆಯರನ್ನು ಸಮಾನವಾಗಿ ಕಾಣಲಾಗುತ್ತಿದ್ದರೂ ಅವರ ವಿರುದ್ಧ ಸಾಂಪ್ರದಾಯಿಕ ಪೂರ್ವಾಗ್ರಹಗಳು ಉಳಿದುಕೊಂಡಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು. ಆದರೆ ಮಹಿಳೆಯರ ಕಲ್ಯಾಣ ಹಾಗೂ ಸಬಲೀಕರಣಕ್ಕೆ ಸರಕಾರವು ಸಮಾನ ಮಹತ್ವ ನೀಡುತ್ತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

►2024ರ ಲೋಕಸಭಾ ಚುನಾವಣೆಗಳ ಬಗ್ಗೆ ಪ್ರಸ್ತಾವಿಸಿದ ಅವರು ಸುಮಾರು 97 ಕೋಟಿ ಅರ್ಹ ಮತದಾರರು ಪಾಲ್ಗೊಂಡಿದ್ದ ಈ ಚುನಾವಣೆಯು, ಇತಿಹಾಸದಲ್ಲೇ ಅತಿ ದೊಡ್ಡ ಚುನಾವಣಾ ಪ್ರಕ್ರಿಯೆಯಾಗಿದೆ ಎಂದರು. ಚುನಾವಣಾ ಪ್ರಕ್ರಿಯೆಯು ಸುಗಮವಾಗಿ ಸಾಗುವುದನ್ನು ಖಾತರಿಪಡಿಸಿದ ಚುನಾವಣಾ ಆಯೋಗ ಹಾಗೂ ಭದ್ರತಾ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News