“ಕುಕಿ ಬಂಡುಕೋರರ ಜೊತೆಗಿನ ‘ದಮನ ಕಾರ್ಯಾಚರಣೆ ನಿಲುಗಡೆ’ ಒಪ್ಪಂದ ರದ್ದುಪಡಿಸಿ”
ಇಂಫಾಲ: ಕುಕಿ ಬಂಡುಕೋರ ಗುಂಪುಗಳೊಂದಿಗೆ ಮಾಡಿಕೊಂಡಿರುವ ‘ದಮನ ಕಾರ್ಯಾಚರಣೆ ನಿಲುಗಡೆ’ ಒಪ್ಪಂದವನ್ನು ರದ್ದುಪಡಿಸಬೇಕೆಂದು ಕೋರಿ ಮಣಿಪುರದ 60 ಶಾಸಕರ ಪೈಕಿ 34 ಶಾಸಕರು ರವಿವಾರ ನಿರ್ಣಯವೊಂದನ್ನು ಅಂಗೀಕರಿಸಿದ್ದಾರೆ.
ಅದೂ ಅಲ್ಲದೆ, ಅಸ್ಸಾಮ್ ರೈಫಲ್ಸ್ ನ ಬದಲಿಗೆ ‘‘ಕಾರ್ಯಾಚರಿಸುವ ಸಾಮರ್ಥ್ಯವಿರುವ’’ ಭದ್ರತಾ ಪಡೆಗಳನ್ನು ನಿಯೋಜಿಸುವಂತೆಯೂ ಶಾಸಕರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
‘ದಮನ ಕಾರ್ಯಾಚರಣೆ ನಿಲುಗಡೆ’ ಒಪ್ಪಂದಕ್ಕೆ ಕೇಂದ್ರ ಸರಕಾರ, ಮಣಿಪುರ ಸರಕಾರ ಮತ್ತು ಕುಕಿ ಬಂಡುಕೋರ ಸಂಘಟನೆಗಳ ಎರಡು ಒಕ್ಕೂಟಗಳಾದ ಕುಕಿ ನ್ಯಾಶನಲ್ ಆರ್ಗನೈಸೇಶನ್ಸ್ ಮತ್ತು ಯುನೈಟೆಡ್ ಪೀಪಲ್ಸ್ ಫ್ರಂಟ್ 2008ರಲ್ಲಿ ಸಹಿ ಹಾಕಿವೆ.
ಈ ಒಪ್ಪಂದದ ಪ್ರಕಾರ, ಭದ್ರತಾ ಪಡೆಗಳಾಗಲಿ, ಬಂಡುಕೋರ ಗುಂಪುಗಳಾಗಲಿ ಪರಸ್ಪರರ ವಿರುದ್ಧ ದಾಳಿ ನಡೆಸುವಂತಿಲ್ಲ. ಬಂಡುಕೋರ ಗುಂಪುಗಳು ನೆಲದ ಕಾನೂನಿಗೆ ತಲೆಬಾಗಬೇಕು ಮತ್ತು ಕೇಂದ್ರ ಸರಕಾರ ಗುರುತಿಸಿರುವ ಶಿಬಿರಗಳಲ್ಲೇ ಇರಬೇಕು.
ಈ ಒಪ್ಪಂದ ಮತ್ತು ಅದು ಸಶಸ್ತ್ರ ಗುಂಪುಗಳಿಗೆ ಕೇಂದ್ರೀಯ ಪಡೆಗಳಿಂದ ನೀಡುವ ವಿನಾಯಿತಿಯು, ಮಣಿಪುರದ ‘‘ಎಂದಿಗೂ ಮುಗಿಯದ ಹಿಂಸಾ ಸರಣಿಯ ಮೂಲ ಕಾರಣಗಳಾಗಿವೆ’’ ಎಂದು ಈ ಶಾಸಕರು ಅಭಿಪ್ರಾಯಪಟ್ಟಿದ್ದಾರೆ.
‘‘ಹಾಗಾಗಿ, ದಮನ ಕಾರ್ಯಾಚರಣೆ ನಿಲುಗಡೆ ಒಪ್ಪಂದವನ್ನು ತಕ್ಷಣ ರದ್ದುಪಡಿಸಬೇಕು’’ ಎಂದು ಜಂಟಿ ಹೇಳಿಕೆಯೊಂದರಲ್ಲಿ ಶಾಸಕರು ಒತ್ತಾಯಿಸಿದ್ದಾರೆ. ‘‘2024 ಫೆಬ್ರವರಿ 29ರ ಅಂತಿಮ ದಿನಾಂಕದ ಬಳಿಕ ಅದನ್ನು ವಿಸ್ತರಿಸಬಾರದು’’ ಎಂದು ಅವರು ಒತ್ತಾಯಿಸಿದ್ದಾರೆ.