SDRF ನಿಧಿಯ ಬಳಕೆ ಮೇಲೆ ನಿರ್ಬಂಧವಿರುವುದರಿಂದ, ವಯನಾಡ್ ಗೆ ವಿಶೇಷ ಪ್ಯಾಕೇಜ್ ಅಗತ್ಯ: ಕೇರಳ ಸರಕಾರ
ತ್ರಿಶೂರ್: ವಯನಾಡ್ ಭೂಕುಸಿತ ಪ್ರದೇಶಗಳ ಪುನರ್ವಸತಿಗೆ ಸಂಬಂಧಿಸಿದ ನಿಧಿ ಬಳಕೆ ಬಗ್ಗೆ ಕೇರಳ ಹೈಕೋರ್ಟ್ ತೀವ್ರ ಟೀಕೆ ಮಾಡಿದ ಬೆನ್ನಿಗೇ, ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಲು ವಿಶೇಷ ಪ್ಯಾಕೇಜ್ ಹಾಗೂ ಹೆಚ್ಚುವರಿ ನೆರವಿಗಾಗಿನ ತನ್ನ ಬೇಡಿಕೆಯನ್ನು ಕೇರಳ ಸರಕಾರ ಪುನರುಚ್ಚರಿಸಿದೆ.
ಹಾಲಿ ಮಾನದಂಡಗಳ ಕಾರಣಕ್ಕೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಲ್ಲಿರುವ ಮೊತ್ತವನ್ನು ವಿನಿಯೋಗಿಸಲು ನಿರ್ಬಂಧಗಳಿವೆ. ಹೀಗಾಗಿ ಭೂಕುಸಿತ ಪೀಡಿತ ಪ್ರದೇಶಗಳ ನಿರ್ದಿಷ್ಟ ಸಮಸ್ಯೆಗಳನ್ನು ಈ ನಿಧಿಯಿಂದ ಪರಿಹರಿಸಲು ಸಾಧ್ಯವಿಲ್ಲ ಎಂದು ರಾಜ್ಯ ಕಂದಾಯ ಸಚಿವ ಕೆ.ರಾಜನ್ ಹೇಳಿದ್ದಾರೆ.
ಆದರೆ, ರಾಜ್ಯ ಸರಕಾರದ ವಿರುದ್ಧ ಹೈಕೋರ್ಟ್ ಮಾಡಿರುವ ಟೀಕೆಗಳ ಕುರಿತು ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ. ನ್ಯಾಯಾಲಯದಲ್ಲಿ ವಾಸ್ತವವಾಗಿ ಏನಾಗಿದೆ ಎಂಬುದನ್ನು ತಿಳಿದ ನಂತರವಷ್ಟೆ ನಾನು ಪ್ರತಿಕ್ರಿಯೆ ನೀಡಲು ಸಾಧ್ಯ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ, ವಯನಾಡ್ ನ ಭೂಕುಸಿತ ಪೀಡಿತ ಪ್ರದೇಶಗಳಲ್ಲಿನ ಪುನರ್ವಸತಿಗೆ ಸಂಬಂಧಿಸಿದ ಅಂಕಿ-ಅಂಶಗಳು ಅಸಮರ್ಪಕವಾಗಿವೆ ಎಂದು ಕೇರಳ ಸರಕಾರ ಹಾಗೂ ಕೇರಳ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿರುದ್ಧ ಕೇರಳ ಹೈಕೋರ್ಟ್ ಚಾಟಿ ಬೀಸಿತ್ತು.