ನಾಳೆ ತೆಲಂಗಾಣ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ

Update: 2023-12-05 08:29 GMT

Photo: PTI

ಹೈದರಾಬಾದ್: ತೆಲಂಗಾಣ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ ತೆಲಂಗಾಣ ಕಾಂಗ್ರೆಸ್ ಮುಖ್ಯಸ್ಥ ರೇವಂತ್ ರೆಡ್ಡಿ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಈ ಪ್ರಕಟಣೆಗೆ ಕಾಂಗ್ರೆಸ್ ನಾಯಕತ್ವವು ಅನುಮೋದನೆ ನೀಡಿದ್ದು, ನಾಳೆ ಅಥವಾ ನಾಡಿದ್ದು ರೇವಂತ್ ರೆಡ್ಡಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ ಎಂದು indiatoday.in ವರದಿ ಮಾಡಿದೆ.

ಹಿರಿಯ ಕಾಂಗ್ರೆಸ್ ನಾಯಕರಾದ ಉತ್ತಮ್ ಕುಮಾರ್ ರೆಡ್ಡಿ ಹಾಗೂ ಭಟ್ಟಿ ವಿಕ್ರಮಾರ್ಕ ಅವರನ್ನು ಉಪ ಮುಖ್ಯಮಂತ್ರಿಗಳನ್ನಾಗಿ ನೇಮಿಸುವ ಅಥವಾ ಅವರಿಗೆ ಉತ್ತಮ ಖಾತೆಗಳನ್ನು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದೇ ವೇಳೆ ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆಯನ್ನು ನಿಗದಿತ ಅವಧಿಗೆ ಬದಲಿಸುವ ಯಾವುದೇ ಸೂತ್ರ ಇಲ‍್ಲ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

ಈ ನಡುವೆ, ಕರ್ನಾಟಕ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ನಿವಾಸವನ್ನು ಉತ್ತಮ್ ರೆಡ್ಡಿ ತಲುಪಿದ್ದು, ಇದರ ಬೆನ್ನಿಗೇ ರೇವಂತ್ ರೆಡ್ಡಿ ಅವರೇ ತೆಲಂಗಾಣದ ಮುಖ್ಯಮಂತ್ರಿ ಆಗಬಹುದು ಎಂಬ ವದಂತಿಗಳು ದಿಟ್ಟವಾಗಿ ಹರಡಿವೆ.

ಮುಖ್ಯಮಂತ್ರಿ ಹುದ್ದೆಗೆ ರೇವಂತ್ ರೆಡ್ಡಿ ಆಯ್ಕೆಯಾಗಬಹುದೆ ಅಥವಾ ಬಿಆರ್‍ಎಸ್ ಪಕ್ಷವೇನಾದರೂ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿದೆಯೆ ಎಂಬ ಸುದ್ದಿಗಾರರ ಪ್ರಶ‍್ನೆಗೆ ಉತ್ತರಿಸಲು ಉತ್ತಮ್ ರೆಡ್ಡಿ ನಿರಾಕರಿಸಿದರು.

ಮಲ್ಕಜ್ ಗಿರಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿರುವ ರೇವಂತ್ ರೆಡ್ಡಿ, ತೆಲಂಗಾಣ ರಾಜಕೀಯ ವಲಯದಲ್ಲಿ ಪ್ರಮುಖ ಹೆಸರು. ಅವರು 2017ರಲ್ಲಿ ತೆಲುಗು ದೇಶಂ ಪಕ್ಷದಿಂದ ಕಾಂಗ್ರೆಸ್ ಪಕ್ಷಕ್ಕೆ ಪಕ್ಷಾಂತರ ಮಾಡಿದ ನಂತರ ತೆಲಂಗಾಣ ರಾಜಕೀಯ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿ ಹೋಯಿತು.

ಎರಡು ಬಾರಿಯ ಶಾಸಕರೂ ಆಗಿದ್ದ ರೇವಂತ್ ರೆಡ್ಡಿ, ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ವಿರುದ್ಧ ಆಕ್ರಮಣಕಾರಿ ಪ್ರಚಾರ ಅಭಿಯಾನವನ್ನು ನಡೆಸಿದ್ದರು. ಅವರೊಂದಿಗೆ ನೇರಾನೇರ ಸ್ಪರ್ಧೆಗಿಳಿದಿದ್ದ ರೇವಂತ್ ರೆಡ್ಡಿ, ಸಾರ್ವಜನಿಕ ಸಮಾವೇಶಗಳಲ್ಲಿ ಅತ್ಯಂತ ಜನಪ್ರಿಯ ನಾಯಕರಾಗಿ ಹೊರಹೊಮ್ಮಿದ್ದರು ಹಾಗೂ ಮುಖ್ಯಮಂತ್ರಿ ಹುದ್ದೆಗೆ ಸಮರ್ಥ ಉಮೇದುವಾರರಾಗಿ ರೂಪುಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News