ಬಿಜೆಪಿ ಜೊತೆ ಆರ್ ಎಲ್ ಡಿ ಮೈತ್ರಿ: ಜಯಂತ್ ಚೌಧುರಿ ಘೋಷಣೆ

Update: 2024-02-09 15:24 GMT

 ಜಯಂತ್ ಚೌಧುರಿ | Photo: PTI 

ಹೊಸದಿಲ್ಲಿ : 2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ, ಜಯಂತ್ ಚೌಧುರಿ ನೇತೃತ್ವದ ರಾಷ್ಟ್ರೀಯ ಲೋಕದಳ (ಆರ್ ಎಲ್ ಡಿ )ವು ಉತ್ತರಪ್ರದೇಶ ದಲ್ಲಿ ಬಿಜೆಪಿ ಜೊತೆ ಮೈತ್ರಿಯೇರ್ಪಡಿಸಿಕೊಳ್ಳುವುದನ್ನು ಗುರುವಾರ ದೃಢಪಡಿಸಿದೆ. ನೂತನ ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಲೋಕಸಭಾ ಚುನಾವಣೆಯಲ್ಲಿ ಆರ್ ಎಲ್ ಡಿ ಯು ಉತ್ತರಪ್ರದೇಶದ ಭಾಗ್ಪತ್ ಹಾಗೂ ಬಿಜನೋರ್ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

ಅಲ್ಲದೆ ಆರ್ ಎಲ್ ಡಿ ಗೆ ಒಂದು ರಾಜ್ಯಸಭಾ ಸ್ಥಾನವನ್ನು ಕೊಡಿಸುವ ಭರವಸೆಯನ್ನೂ ಬಿಜೆಪಿ ನೀಡಿದೆ ಎಂದು ‘ಇಂಡಿಯಾ ಟುಡೇ’ ಸುದ್ದಿಸಂಸ್ಥೆ ವರದಿ ಮಾಡಿದೆ.

ಲೋಕಸಭಾ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಇರುವಂತೆಯೇ, ಎನ್ಡಿಎ ಪಾಳಯಕ್ಕೆ ಲೋಕದಳ ಸೇರ್ಪಡೆಯು ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಹಿನ್ನಡೆಯುಂಟು ಮಾಡಿದೆ.

ಮಾಜಿ ಪ್ರಧಾನಿ ದಿವಂಗತ ಚರಣ್ ಸಿಂಗ್ ಅವರಿಗೆ ಭಾರತರತ್ ನ ಪುರಸ್ಕಾರವನ್ನು ಕೇಂದ್ರ ಸರಕಾರ ಘೋಷಿಸಿದ ಬೆನ್ನಲ್ಲೇ, ಅವರ ಮೊಮ್ಮಗ, ಆರ್ ಎಲ್ ಡಿ ವರಿಷ್ಠ ಜಯಂತ್ ಚೌಧುರಿ ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಪ್ರಧಾನಿ ನರೇಂದ್ರ ಮೋದಿಯವರು ದೇಶದ ನಾಡಿಮಿಡಿತವನ್ನು ಅರಿತಿದ್ದಾರೆಂದು ಶ್ಲಾಘಿಸಿದರು.‘‘ ಹಿಂದಿನ ಸರಕಾರಗಳಿಗೆ ಈವರೆಗೆ ಏನು ಮಾಡಲು ಸಾಧ್ಯವಾಗಿಲ್ಲವೋ, ಅದನ್ನು ಪ್ರಧಾನಿ ಮೋದಿಯವರ ದೂರದೃಷ್ಟಿಯು ಸಾಧಿಸಿದೆ. ಈವರೆಗೆ ಮುಖ್ಯವಾಹಿನಿಯ ಭಾಗವಾಗಿರದ ಜನರನ್ನು ಪ್ರೋತ್ಸಾಹಿಸುತ್ತಿರುವ ಪ್ರಧಾನಿ ಮೋದಿಯವರ ಸರಕಾರಕ್ಕೆ ಮತ್ತೊಮ್ಮೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಇಚ್ಚಿಸುತ್ತೇನೆ” ಎಂದರು.

ತನ್ನ ತಾತ ಹಾಗೂ ಮಾಜಿ ಪ್ರಧಾನಿ ದಿವಂಗತ ಚೌಧುರಿ ಚರಣ್ ಸಿಂಗ್ ಅವರಿಗೆ ಭಾರತ ರತ್ ನವನ್ನು ಘೋಷಿಸಿದ್ದಕ್ಕಾಗಿ ಅವರು ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜತೆಯನ್ನು ಅರ್ಪಿಸಿದರು,

‘‘ ನನ್ನ ಪಾಲಿಗೆ ಇಂದು ಮಹಾನ್ ದಿನ ಹಾಗೂ ಭಾವನಾತ್ಮಕ ಕ್ಷಣವಾಗಿದೆ. ರಾಷ್ಟ್ರಪತಿ, ಕೇಂದ್ರ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ಪ್ರಶಸ್ತಿಯು ನರೇಂದ್ರ ಮೋದಿಯವರ ದೂರದರ್ಶಿತ್ವದ ಭಾಗವಾಗಿದೆ. ಈ ಸಲ ಮೂರು ಭಾರತ ರತ್ ನ ಪುರಸ್ಕಾರಗಳನ್ನು ನೀಡಲಾಗಿದೆ. ಈ ನಿರ್ಧಾರದ ಜೊತೆ ಜನತೆಯ ಭಾವನೆಗಳು ಕೂಡಾ ಬೆಸೆದುಕೊಂಡಿವೆ ’’ ಎಂದವರು ಹೇಳಿದರು.

ರಾಷ್ಟ್ರೀಯ ಲೋಕದಳವು ಉತ್ತರಪ್ರದೇಶದಲ್ಲಿ ಅದರಲ್ಲಿಯೂ ಜಾಟ್ ಸಮುದಾಯ ಪ್ರಾಬಲ್ಯದ ಪ್ರದೇಶದಲ್ಲಿ ಬಲಿಷ್ಠವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಪಡೆಯಲು ಯಾವುದೇ ಅಡ್ಜಿಯುಂಟಾಗದಂತೆ ನೋಡಿಕೊಳ್ಳಲು ಬಿಜೆಪಿ ಶತಾಯಗತಾಯ ಯತ್ನಿಸುತ್ತಿದೆ. ಜಾಟ್ ಮತದಾರರನ್ನು ಸೆಳೆಯುವ ಜೊತೆಗೆ, ರೈತರು ಹಾಗೂ ಕುಸ್ತಿಪಟುಗಳ ಪ್ರತಿಭಟನೆಯಿಂದಾಗಿ ಉಂಟಾಗಿರುವ ಪ್ರತಿಕೂಲ ಪರಿಣಾಮಗಳನ್ನು ತೊಡೆದುಹಾಕಲು ಜಯಂತ್ ಚೌಧುರಿ ನೆರವಾಗಬಹುದೆಂಬ ಆಶಯವನ್ನು ಬಿಜೆಪಿ ಹೊಂದಿದೆ.

ಮಾಜಿ ಪ್ರಧಾನಿ ಚೌಧುರಿ ಚರಣ್ ಸಿಂಗ್ ಅವರಿಗೆ ಭಾರತರತ್ ನ ಪುರಸ್ಕಾರವನ್ನು ಘೋಷಿಸುವ ಮೂಲಕ ಕೇಂದ್ರ ಸರಕಾರವು ನನ್ನ ಹೃದಯವನ್ನು ಗೆದ್ದಿದೆ (ದಿಲ್ ಜೀತ್ಲಿಯಾ) ಎಂದು ಜಯಂತ್ ಚೌಧುರಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News