ರಸ್ತೆ ತೆರವು: ಪೊಲೀಸ್ ಠಾಣೆಗೂ ತಟ್ಟಿದ ಬುಲ್ಡೋಜರ್ ಕಾರ್ಯಾಚರಣೆಯ ಬಿಸಿ!
ಲಕ್ನೋ: ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಬುಲ್ಡೋಜರ್ ಕಾರ್ಯಾಚರಣೆಯ ಬಿಸಿ ಇದೀಗ ಪೊಲೀಸ್ ಠಾಣೆಗೇ ತಟ್ಟಿದೆ. ಸಿದ್ಧಾರ್ಥನಗರ ಕೋತ್ವಾಲಿ ಪೊಲೀಸ್ ಠಾಣೆಯ ಮುಂದೆ ನಿಂತ ಬುಲ್ಡೋಜರ್, ಏನಾಗುತ್ತಿದೆ ಎಂದು ಪೊಲೀಸರು ಗಾಬರಿಯಿಂದ ನೋಡುತ್ತಿರುವ ಮಧ್ಯೆಯೇ ಠಾಣೆಯ ಕಾಂಪೌಂಡ್ ಮತ್ತು ಗೇಟನ್ನು ನೆಲಸಮಗೊಳಿಸುವ ಮೂಲಕ ತನ್ನ ಕಾರ್ಯ ಪೂರ್ಣಗೊಳಿಸಿತು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರು ಇದಕ್ಕೆ ಸಾಕ್ಷಿಯಾದರು.
ಸರ್ಕಾರ ಧ್ವಂಸಗೊಳಿಸಲು ಪಟ್ಟಿ ಮಾಡಿದ್ದ 55 ಅಕ್ರಮ ನಿರ್ಮಾಣಗಳ ಪೈಕಿ ಇದು ಕೂಡಾ ಸೇರಿದ್ದು, ರಸ್ತೆಗಾಗಿ ಮೀಸಲಿಟ್ಟಿದ್ದ ಸರ್ಕಾರಿ ಜಾಗವನ್ನು ಮತ್ತೆ ಪಡೆಯುವ ಸಲುವಾಗಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ರಸ್ತೆಯ ಅರ್ಧಭಾಗವನ್ನು ಅಕ್ರಮವಾಗಿ ಠಾಣೆ ಕಬಳಿಸಿ ಕಾಂಪೌಂಡ್ ಗೋಡೆ ನಿರ್ಮಿಸಿತ್ತು.
ಭಾನುವಾರ ನಡೆದ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಖಾಕಿಧಾರಿಗಳಿಗೆ ಇದು ಅಚ್ಚರಿಯ ಘಟನೆಯಾಯಿತು. ಧ್ವಂಸಗೊಳ್ಳುವ ನಿರ್ಮಾಣಗಳ ಪಟ್ಟಿಯಲ್ಲಿ ಪೊಲೀಸ್ ಠಾಣೆಯ ಗೋಡೆಯೂ ಸೇರಿದೆ ಎಂಬ ಕಲ್ಪನೆಯೂ ಅವರಿಗೆ ಇರಲಿಲ್ಲ.
ಈ ತೆರವು ಕಾರ್ಯಾಚರಣೆಗೆ ನಿರೀಕ್ಷೆಯಂತೆ ಪೊಲೀಸರಿಂದ ಪ್ರತಿರೋಧವೂ ವ್ಯಕ್ತವಾಯಿತು. "ಲಿಖಿತ ಆದೇಶವಿಲ್ಲದೇ ನಮ್ಮ ಪೊಲೀಸ್ ಠಾಣೆಯ ಆವರಣಗೋಡೆಯನ್ನು ಹೇಗೆ ಒಡೆಯುತ್ತಿದ್ದೀರಿ" ಎಂದು ಠಾಣಾಧಿಕಾರಿ ಸಂತೋಷ್ ತಿವಾರಿ, ತೆರವು ಕಾರ್ಯಾಚರಣೆ ತಂಡದ ಮುಖ್ಯಸ್ಥರನ್ನು ಪ್ರಶ್ನಿಸಿದರು.
ಇದಕ್ಕೆ ತಕ್ಕ ಉತ್ತರ ನೀಡಿದ ಹೆಚ್ಚುವರಿ ಜಿಲ್ಲಾಧಿಕಾರಿ ಉಮಾಶಂಕರ್ ಸಿಂಗ್ ಮತ್ತು ಉಪವಿಭಾಗಾಧಿಕಾರಿ ಲಲಿತ್ ಕುಮಾರ್ ಅವರು, "ನಾವು ಅಕ್ರಮ ನಿರ್ಮಾಣಗಳನ್ನು ಧ್ವಂಸ ಮಾಡುತ್ತಿರುವಾಗ ಅದರಲ್ಲಿ ಪೊಲೀಸ್ ಠಾಣೆಯೂ ಸೇರಿದ್ದರೆ ಅದನ್ನು ಬಿಟ್ಟುಬಿಡಲು ಹೇಗೆ ಸಾಧ್ಯ" ಎಂದು ಖಾರವಾಗಿ ಕೇಳಿದರು.
ಈ ಹಂತದಲ್ಲಿ ಠಾಣಾಧಿಕಾರಿ, ವೃತ್ತ ನಿರೀಕ್ಷಕ ಅರುಣ್ ಕಾಂತ್ ತಿವಾರಿ ಅವರಿಗೆ ಸುದ್ದಿ ಮುಟ್ಟಿಸಿ, ಪೊಲೀಸ್- ಆಡಳಿತದ ಚಕಮಕಿಗೆ ನಾಂದಿ ಹಾಡಿದರು. ಈಗಾಗಲೇ ಬುಲ್ಡೋಜರ್ ಕ್ರಮದಿಂದ ಕಟ್ಟಡಗಳನ್ನು ಕಳೆದುಕೊಂಡ ಹಲವು ಮಂದಿ ಇದನ್ನು ಕುತೂಹಲದಿಂದ ವೀಕ್ಷಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಚಿ ಸಿಂಗ್ ಅವರಿಂದ ಕರೆ ಬಂದ ಬಳಿಕ ಈ ಸಂಘರ್ಷ ಸುಖಾಂತ್ಯ ಕಂಡಿತು. ಕೇವಲ ಪೊಲೀಸ್ ಠಾಣೆಯನ್ನು ಮಾತ್ರ ಗುರಿ ಮಾಡಿಲ್ಲ. ಸ್ಥಳೀಯ ಪಂಚಾಯ್ತಿ ಭವನದ ಭಾಗವನ್ನು ಕೂಡಾ ಧ್ವಂಸಗೊಳಿಸಲಾಗಿದೆ. 2017ರಿಂದಲೂ ಇರುವ ಒತ್ತುವರಿಯನ್ನು ತೆರವುಗೊಳಿಸಲಾಗಿದ್ದು, ಇದುವರೆಗೆ 6 ಮೀಟರ್ ಅಗಲವಿದ್ದ ರಸ್ತೆ ಇದೀಗ 13 ಮೀಟರ್ ಅಗಲವಾಗಿದೆ ಎಂದು ಜಿಲ್ಲಾಧಿಕಾರಿ ರಾಜಾ ಗಣಪತಿ ಆರ್ ಸ್ಪಷ್ಟಪಡಿಸಿದ್ದಾರೆ.
#SiddharthNagar- पुलिस स्टेशन अतिक्रमण का शिकार हो गया. नगर निगम के कर्मचारियों ने पुलिस स्टेशन के कुछ हिस्सा पर बुलडोजर चला दिया, प्रशासन का कहना था कि पुलिस स्टेशन का वह हिस्सा अतिक्रमण के दायरे में आ रहा था. इस घटना के बाद वहां मौजूद एडीएम और सीओ के बीच काफी बहस देखने को मिली,… pic.twitter.com/PlmBjNYMUg
— Hindi States (@HindiStates) August 27, 2024