ನೋಟು ನಿಷೇಧ, ಜಿಎಸ್‌ಟಿ ಜಾರಿ ಮತ್ತು ಕೋವಿಡ್‌ನಿಂದಾಗಿ ಅನೌಪಚಾರಿಕ ಕ್ಷೇತ್ರಕ್ಕೆ 11.3 ಲಕ್ಷ ಕೋಟಿ ರೂ.ನಷ್ಟ

Update: 2024-07-10 14:00 GMT

ನೋಟು ನಿಷೇಧ (ಸಾಂದರ್ಭಿಕ ಚಿತ್ರ) , ಜಿಎಸ್‌ಟಿ , ಕೋವಿಡ್‌(WHO)

ಹೊಸದಿಲ್ಲಿ : ನೋಟು ನಿಷೇಧ,ಜಿಎಸ್‌ಟಿ ಜಾರಿ ಮತ್ತು ಕೋವಿಡ್ ಸಾಂಕ್ರಾಮಿಕ ಸೇರಿದಂತೆ 2016ರಿಂದ ಸ್ಥೂಲ ಆರ್ಥಿಕ ಆಘಾತಗಳ ಒಟ್ಟು ಪರಿಣಾಮದಿಂದಾಗಿ ವಿಶೇಷವಾಗಿ ಭಾರತದ ಅನೌಪಚಾರಿಕ ಕ್ಷೇತ್ರವು ಜಿಡಿಪಿಯ ಶೇ.4.3 ಅಥವಾ 11.3 ಲಕ್ಷ ಕೋಟಿ ರೂ.ಗಳಷ್ಟು ಆರ್ಥಿಕ ನಷ್ಟವನ್ನು ಅನುಭವಿಸಿದೆ ಎಂದು ಅಂದಾಜಿಲಾಗಿದೆ ಎಂದು ಇಂಡಿಯಾ ರೇಟಿಂಗ್ಸ್ ಆ್ಯಂಡ್ ರೀಸರ್ಚ್ ಮಂಗಳವಾರ ತನ್ನ ವರದಿಯಲ್ಲಿ ಹೇಳಿದೆ

ಇತ್ತೀಚಿನ ಸ್ಥೂಲ ಆರ್ಥಿಕ ಆಘಾತಗಳು ಈ ಕ್ಷೇತ್ರದ ಮೇಲೆ ತೀವ್ರ ಪರಿಣಾಮವನ್ನುಂಟು ಮಾಡಿವೆ ಎಂದು ಹೇಳಿರುವ ಇಂಡಿಯಾ ರೇಟಿಂಗ್ಸ್‌ನ ಪ್ರಧಾನ ಅರ್ಥಶಾಸ್ತ್ರಜ್ಞ ಸುನಿಲ್ ಕುಮಾರ್ ಸಿನ್ಹಾ ಅವರು, 2015-16 ಮತ್ತು 2022-23ರ ನಡುವೆ ಅನೌಪಚಾರಿಕ ಕ್ಷೇತ್ರದಲ್ಲಿಯ 63 ಲಕ್ಷ ಉದ್ಯಮಗಳು ಮುಚ್ಚಲ್ಪಟ್ಟಿವೆ ಮತ್ತು ಸುಮಾರು 1.6 ಕೋಟಿ ಉದ್ಯೋಗಗಳು ನಷ್ಟವಾಗಿವೆ ಎಂದು ಅಂದಾಜಿಸಿದ್ದಾರೆ. ಈ ಅವಧಿಯಲ್ಲಿ ಆರ್ಥಿಕತೆಯ ಸದೃಢೀಕರಣದಲ್ಲಿ ಏರಿಕೆಯಾಗಿತ್ತು ಮತ್ತು ಇದು ಹೆಚ್ಚಿನ ತೆರಿಗೆ ಸಂಗ್ರಹಕ್ಕೆ ಕಾರಣವಾಗಿತ್ತು. ಆರ್ಥಿಕತೆಯ ಸದೃಢೀಕರಣವು ಮುಂದಕ್ಕೊಯ್ಯುವ ದಾರಿಯಾಗಿದ್ದರೆ ಅಸಂಘಟಿತ ವಲಯದಲ್ಲಿ ಉದ್ಯಮಗಳ ಸಂಖ್ಯೆ ತಗ್ಗಿದ್ದು ಉದ್ಯೋಗಾವಕಾಶ ಸೃಷ್ಟಿಯ ಮೇಲೆ ಪ್ರತಿಕೂಲ ಪರಿಣಾಮವನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

2022-23ರಲ್ಲಿ ಇಂತಹ ಅಸಂಘಟಿತ ಉದ್ಯಮಗಳಿಂದ ಆರ್ಥಿಕತೆಯಲ್ಲಿ ಗ್ರಾಸ್-ವ್ಯಾಲ್ಯೂ ಆ್ಯಡೆಡ್ (ಜಿವಿಎ) ಅಥವಾ ಒಟ್ಟು ಮೌಲ್ಯದ ಪಾಲು ಈಗಲೂ 2015-16ರ ಮಟ್ಟಕ್ಕಿಂತ ಶೇ.1.6ರಷ್ಟು ಕಡಿಮೆಯಿದೆ. ಅಲ್ಲದೆ 2010-11 ಮತ್ತು 2015-16ರ ನಡುವೆ ಶೇ.7.4ರಷ್ಟಿದ್ದ ಅವುಗಳ ಸಂಯೋಜಿತ ವಾರ್ಷಿಕ ಬೆಳವಣಿಗೆ ದರ(ಸಿಎಜಿಆರ್)ವು ಆಗಿನಿಂದ ಶೇ.0.2ರಷ್ಟು ಕುಗ್ಗಿದೆ ಎಂದು ಇತ್ತೀಚಿಗೆ ಬಿಡುಗಡೆಗೊಂಡ ಸರಕಾರದ ಅಸಂಘಟಿತ ವಲಯದ ಉದ್ಯಮಗಳ ವಾರ್ಷಿಕ ಸಮೀಕ್ಷೆಯನ್ನು ಆಧರಿಸಿ ಇಂಡಿಯಾ ರೇಟಿಂಗ್ಸ್ ಹೇಳಿದೆ.

ಸಮೀಕ್ಷೆಯ ಪ್ರಕಾರ 2021-22ರಲ್ಲಿ 5.97 ಕೋಟಿ ಯಷ್ಟಿದ್ದ ಕೃಷಿಯೇತರ ವಲಯದ ಉದ್ಯಮಗಳ ಸಂಖ್ಯೆ 2022-23ರಲ್ಲಿ 6.5 ಕೋಟಿ ಗೆ ಏರಿಕೆಯಾಗಿದೆ ಮತ್ತು ಉದ್ಯೋಗಗಳು 9.79 ಕಾರ್ಮಿಕರಿಂದ 10.96 ಕೋಟಿ ಗೆ ಏರಿವೆ. ಆದರೆ ಇದು ಆರ್ಥಿಕ ಆಘಾತಗಳಿಗಿಂತ ಮೊದಲಿನ 2015-16ರ ಅವಧಿಯಲ್ಲಿದ್ದ 11.13 ಕೋಟಿ ಕಾರ್ಮಿಕರ ಸಂಖ್ಯೆಗಿಂತ ಕಡಿಮೆಯಾಗಿದೆ. 2015-16ರಲ್ಲಿ 3.6 ಕೋಟಿ ಯಷ್ಟಿದ್ದ ಉತ್ಪಾದನಾ ಉದ್ಯೋಗಗಳ ಸಂಖ್ಯೆ 2022-23ರಲ್ಲಿ 3.06ಕ್ಕೆ ಕುಸಿದಿದ್ದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಉತ್ಪಾದನೆ, ವ್ಯಾಪಾರ ಮತ್ತು ಇತರ ಸೇವೆಗಳ (ಎಂಟಿಒ) ಕ್ಷೇತ್ರದಲ್ಲಿ ಅಸಂಘಟಿತ ಉದ್ಯಮಗಳ ನೈಜ ಜಿವಿಎ 2022-23ರಲ್ಲಿ 9.51 ಲಕ್ಷ ಕೋಟಿ ರೂ.ಗಳಷ್ಟಿದ್ದು, ಇದರಲ್ಲಿ ಭಾರತದ ನೈಜ ಎಂಟಿಒ ಜಿವಿಎ ಪಾಲು 2015-16ರಲ್ಲಿದ್ದ ಶೇ.25.7ರಿಂದ ಶೇ.18.2ಕ್ಕೆ ತೀವ್ರವಾಗಿ ಕುಸಿದಿದೆ ಎಂದು ಇತ್ತೀಚಿನ ದತ್ತಾಂಶಗಳು ಸೂಚಿಸಿವೆ.

ಇತರ ಸೇವೆಗಳು ಮತ್ತು ವ್ಯಾಪಾರದಲ್ಲಿ ಕುಗ್ಗುವಿಕೆಯು ತೀವ್ರವಾಗಿದ್ದು, ಆರ್ಥಿಕ ಆಘಾತಗಳ ಮೊದಲಿನ ಅವಧಿಯಲ್ಲಿ ಶೇ.46.9 ಮತ್ತು ಶೇ.34.3ರಷ್ಟಿದ್ದ ಅಸಂಘಟಿತ ವಲಯದ ಪಾಲು 2022-23ರಲ್ಲಿ ಅನುಕ್ರಮವಾಗಿ ಶೇ.32.3 ಮತ್ತು ಶೇ.21.2ಕ್ಕೆ ಕುಸಿದಿದೆ. ಉತ್ಪಾದನಾ ಕ್ಷೇತ್ರದಲ್ಲಿ ಇದೇ ಅವಧಿಯಲ್ಲಿ ಶೇ.12.5ರಿಂದ ಶೇ.10.2ಕ್ಕೆ ಕುಸಿದಿದೆ ಎಂದು ಇಂಡಿಯಾ ರೇಟಿಂಗ್ಸ್ ತನ್ನ ವರದಿಯಲ್ಲಿ ತಿಳಿಸಿದೆ.

2015-16ರ ನಂತರದ ಅವಧಿಯಲ್ಲಿ ಸ್ಥೂಲ ಆರ್ಥಿಕ ಆಘಾತಗಳು ಸಂಭವಿಸಿರದಿದ್ದರೆ ಮತ್ತು ಈ ಉದ್ಯಮಗಳ ಬೆಳವಣಿಗೆಯು 2010-11 ಮತ್ತು 2015-16 ನಡುವಿನ ಮಾದರಿಯನ್ನು ಅನುಸರಿಸಿದ್ದರೆ ಇಂತಹ ಉದ್ಯಮಗಳ ಒಟ್ಟು ಸಂಖ್ಯೆ 2022-23ರಲ್ಲಿ 7.14 ಲಕ್ಷ ಕೋಟಿ ಯನ್ನು ತಲುಪುತ್ತಿತ್ತು ಮತ್ತು ಕಾರ್ಮಿಕರ ಸಂಖ್ಯೆ 12.53 ಕೋಟಿ ಗೆ ಏರಿಕೆಯಾಗುತ್ತಿತ್ತು ಎಂದು ಅದು ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News