ಮಹಾಯುತಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಸಂದರ್ಭ 12 ಲಕ್ಷ ರೂ. ಮೌಲ್ಯದ ವಸ್ತು-ನಗದು ಕಳವು

Update: 2024-12-08 14:12 GMT

PC : PTI

ಮುಂಬೈ: ದಕ್ಷಿಣ ಮುಂಬೈಯ ಅಝಾದ್ ಮೈದಾನದಲ್ಲಿ ಡಿಸೆಂಬರ್ 5ರಂದು ನಡೆದ ಮಹಾಯುತಿ ಸರಕಾರದ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದ ಸಂದರ್ಭ ಚಿನ್ನದ ಚೈನ್, ಮೊಬೈಲ್ ಪೋನ್‌ಗಳು ಹಾಗೂ ನಗದು ಸೇರಿದಂತೆ ಒಟ್ಟು 12 ಲಕ್ಷ ರೂ. ಮೌಲ್ಯದ ವಸ್ತು, ನಗದನ್ನು ಕಳವುಗೈಯಲಾಗಿದೆ ಎಂದು ಪೊಲೀಸರು ರನಿವಾರ ತಿಳಿಸಿದ್ದಾರೆ.

ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಸೆರೆ ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಅಝಾದ್ ಮೈದಾನ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಬಿಜೆಪಿಯ ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ, ಶಿವಸೇನೆಯ ಏಕನಾಥ ಶಿಂಧೆ ಹಾಗೂ ಎನ್‌ಸಿಪಿ ನಾಯಕ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಉದ್ಯಮಿಗಳು, ಸಿನೆಮಾ ನಟರು ಹಾಗೂ ಗಣ್ಯರು ಪಾಲ್ಗೊಂಡಿದ್ದರು.

ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯುವ ಸ್ಥಳ ಹಾಗೂ ಅದರ ಸುತ್ತಮುತ್ತ 4 ಸಾವಿರಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

‘‘ಜನರು ಗೇಟ್ ಸಂಖ್ಯೆ 2ರ ಮೂಲಕ ನಿರ್ಗಮಿಸುತ್ತಿರುವುದರ ಲಾಭವನ್ನು ಕಳ್ಳರು ಪಡೆದುಕೊಂಡರು. ಪೊಲೀಸ್ ಠಾಣೆ ಹಾಗೂ ಕ್ರೈಮ್ ಬ್ರಾಂಚ್‌ನ ಸಿಬ್ಬಂದಿ ಆರೋಪಿಗಳನ್ನು ಸೆರೆ ಹಿಡಿಯಲು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಇದುವರೆಗೆ ಯಾರನ್ನೂ ಬಂಧಿಸಿಲ್ಲ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News