ಪಶ್ಚಿಮ ಬಂಗಾಳ | ಆರೆಸ್ಸೆಸ್ ಮೆರವಣಿಗೆಗೆ ಕಲ್ಕತ್ತಾ ಹೈಕೋರ್ಟ್ ಅನುಮತಿ

ಸಾಂದರ್ಭಿಕ ಚಿತ್ರ (PTI)
ಕೋಲ್ಕತ್ತಾ: ಆರೆಸ್ಸೆಸ್ ಗೆ ಪಶ್ಚಿಮ ಬಂಗಾಳದಲ್ಲಿ ರ್‍ಯಾಲಿ ನಡೆಸಲು ಮತ್ತು ಧ್ವನಿ ವರ್ಧಕಗಳ ಬಳಕೆಗೆ ಕಲ್ಕತ್ತಾ ಹೈಕೋರ್ಟ್ ಶುಕ್ರವಾರ ಅನುಮತಿಯನ್ನು ನೀಡಿದ್ದು ಶಬ್ಧ ಮಿತಿಯನ್ನು ಅನುಸರಿಸುವಂತೆ ಸೂಚಿಸಿದೆ.
ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರಕಾರ ಬುರ್ದ್ವಾನ್ ನಲ್ಲಿ ಮೋಹನ್ ಭಾಗವತ್ ಅವರ ಸಾರ್ವಜನಿಕ ಸಭೆಗೆ ಧ್ವನಿ ವರ್ಧಕಗಳ ಬಳಕೆಗೆ ಅನುಮತಿ ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಆರೆಸ್ಸೆಸ್ ಕಲ್ಕತ್ತಾ ಹೈಕೋರ್ಟ್ ಮೆಟ್ಟಿಲೇರಿತ್ತು.
ಪೂರ್ವ ಬುರ್ದ್ವಾನ್ನಲ್ಲಿರುವ ಸಾಯಿ ಕಾಂಪ್ಲೆಕ್ಸ್ ನಲ್ಲಿ ಫೆಬ್ರವರಿ 16ರಂದು ಆರೆಸ್ಸೆಸ್ ನ ಜನಸಭೆ ನಿಗದಿಯಾಗಿದೆ. ಮೋಹನ್ ಭಾಗವತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದಲ್ಲಿ ಮಾಧ್ಯಮಿಕ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆ ಧ್ವನಿವರ್ಧಕಗಳ ಬಳಕೆಗೆ ಜಿಲ್ಲಾಡಳಿತ ಅನುಮತಿ ನಿರಾಕರಿಸಿತ್ತು.
ರವಿವಾರ ಕಾರ್ಯಕ್ರಮ ಕೇವಲ 1 ಗಂಟೆ 15 ನಿಮಿಷ ಮಾತ್ರ ನಡೆಯಲಿದೆ. ಇದರಿಂದ ಯಾರಿಗೂ ತೊಂದರೆಯಾಗುತ್ತದೆ ಎಂದು ನ್ಯಾಯಾಲಯ ಭಾವಿಸುವುದಿಲ್ಲ. ಪರೀಕ್ಷಾರ್ಥಿಗಳಿಗೆ ಅನಾನುಕೂಲವಾಗದ ರೀತಿಯಲ್ಲಿ ರ್‍ಯಾಲಿ ನಡೆಸಬೇಕು ಮತ್ತು ಕನಿಷ್ಠ ಮಟ್ಟದಲ್ಲಿ ಧ್ವನಿ ವರ್ಧಕಗಳನ್ನು ಬಳಸಬೇಕು ಎಂದು ನ್ಯಾಯಮೂರ್ತಿ ಅಮೃತ ಸಿನ್ಹಾ ಹೇಳಿದ್ದಾರೆ.