ದಿಲ್ಲಿಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ಆರೆಸ್ಸೆಸ್ ಕಚೇರಿ ಪುನರ್ ನಿರ್ಮಾಣ

Update: 2025-02-13 15:50 IST
Photo of RSS building

Photo credit: PTI

  • whatsapp icon

ಹೊಸದಿಲ್ಲಿ : ಆರೆಸ್ಸೆಸ್ ನ ನೂತನ ಕಟ್ಟಡ ʼಕೇಶವ್ ಕುಂಜ್ʼ ಪುನರ್ ನಿರ್ಮಾಣ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ದಿಲ್ಲಿಯ ಝಂಡೇವಾಲನ್ ಪ್ರದೇಶದಲ್ಲಿ 150 ಕೋಟಿ ರೂ. ವೆಚ್ಚದಲ್ಲಿ ನೂತನ ಕಚೇರಿಯನ್ನು ನಿರ್ಮಾಣ ಮಾಡಲಾಗಿದೆ.

3.75 ಎಕರೆ ವಿಸ್ತೀರ್ಣದ ವಿಶಾಲ ಪ್ರದೇಶದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದ್ದು, 2018ರಲ್ಲಿ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಪ್ರಾಚೀನ ಮತ್ತು ಆಧುನಿಕ ತಂತ್ರಗಳನ್ನು ಬಳಸಿಕೊಂಡು ಕಚೇರಿಯನ್ನು ನಿರ್ಮಿಸಲಾಗಿದೆ. 12 ಅಂತಸ್ತಿನ ಕಟ್ಟಡದಲ್ಲಿ 300 ಕೊಠಡಿಗಳಿವೆ. ಮೂರು ದೊಡ್ಡ ಸಭಾಂಗಣಗಳನ್ನು ಹೊಂದಿದ್ದು,1,300ಕ್ಕೂ ಹೆಚ್ಚು ಆಸನದ ಸಾಮರ್ಥ್ಯವನ್ನು ಹೊಂದಿದೆ.

ಗುಜರಾತ್ ಮೂಲದ ವಾಸ್ತುಶಿಲ್ಪಿ ಅನುಪ್ ಡೇವ್ ಕೇಶವ್ ಕುಂಜ್ ಅವರು ಕಟ್ಟಡದ ವಿನ್ಯಾಸ ಕಾರ್ಯವನ್ನು ಮಾಡಿದ್ದಾರೆ. ಕಚೇರಿ ಮತ್ತು ವಸತಿಗಳನ್ನು ಹೊಂದಿರುವ ಮೂರು ಕಟ್ಟಡಗಳಿಗೆ ಸಾಧನ, ಪ್ರೇರಣಾ ಮತ್ತು ಅರ್ಚನಾ ಎಂದು ಹೆಸರಿಸಲಾಗಿದೆ. ಕಟ್ಟಡದಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಸುಮಾರು 8,500 ಪುಸ್ತಕಗಳನ್ನು ಹೊಂದಿರುವ ಬೃಹತ್ ಗ್ರಂಥಾಲಯ, ಹೊರರೋಗಿ ಚಿಕಿತ್ಸಾಲಯ, ಐದು ಹಾಸಿಗೆಗಳ ಸಣ್ಣ ಒಳರೋಗಿ ಸೌಲಭ್ಯವಿರುವ ಚಿಕಿತ್ಸಾಲಯವನ್ನು ಹೊಂದಿದೆ.

ಆರೆಸ್ಸೆಸ್ ಕಾರ್ಯಕ್ರಮಗಳನ್ನು ಆಯೋಜಿಸಲು, ಆರೆಸ್ಸೆಸ್ ಮುಖಂಡರು ಮತ್ತು ಕಾರ್ಯಕರ್ತರಿಗೆ ವಸತಿ ಒದಗಿಸಲು ಹೊಸ ಕಚೇರಿಯನ್ನು ಬಳಸಲಾಗುತ್ತದೆ.

ಹಳೆಯ ಸಂಘದ ಕಚೇರಿಯನ್ನು ಪುನರ್ ನಿರ್ಮಿಸಲು ಕನಿಷ್ಠ 75,000 ಆರೆಸ್ಸೆಸ್ ಕಾರ್ಯಕರ್ತರು ನೆರವು ನೀಡಿದ್ದಾರೆ ಎಂದು ಹೇಳಲಾಗಿದೆ. ಹೊಸದಾಗಿ ನಿರ್ಮಿಸಲಾದ ಸಂಕೀರ್ಣದಲ್ಲಿ ಫೆಬ್ರವರಿ 19ರಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ.

1962ರಿಂದ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಈ ಆರೆಸ್ಸೆಸ್ ಕಚೇರಿಯಲ್ಲಿ ನವೀಕರಣ ಕಾಮಗಾರಿ ಪ್ರಾರಂಭಿಸಿದ್ದರಿಂದ 2016ರಿಂದ ಬಾಡಿಗೆ ಕಚೇರಿಯಲ್ಲಿ ಕಾರ್ಯಚರಿಸುತ್ತಿತ್ತು. ಇದೀಗ ಕಚೇರಿ ಕಾಮಗಾರಿ ಪೂರ್ಣಗೊಂಡಿರುವುದರಿಂದ ಹೊಸ ಕಚೇರಿಯಲ್ಲಿ ಆರೆಸ್ಸೆಸ್‌ ಕಾರ್ಯಚಟುವಟಿಕೆಗಳು ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News