ಹೇಮಂತ್ ಸೋರೆನ್ ಅವರ ಪತ್ನಿಯನ್ನು ಸಿಎಂ ಮಾಡುವ ವದಂತಿ : ಕುಟುಂಬದಲ್ಲಿ ಬಿರುಕು
ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಈಡಿ ಬುಧವಾರ ವಿಚಾರಣೆ ನಡೆಸಿತು. ಇದರ ಜೊತೆಗೆ ಬಿರುಸಿನ ರಾಜಕೀಯ ಚಟುವಟಿಕೆಗಳಿಗೆ ರಾಜ್ಯವು ಸಾಕ್ಷಿಯಾಯಿತು. ಈ ನಡುವೆ ಆಡಳಿತಾರೂಢ ಸೊರೆನ್ ಕುಟುಂಬದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಪಕ್ಷದ ಮುಖ್ಯಸ್ಥ ಶಿಬು ಸೊರೆನ್ ಅವರ ಹಿರಿಯ ಸೊಸೆ, ಜೆಎಂಎಂ ಶಾಸಕಿ ಸೀತಾ ಸೊರೆನ್ ಅವರು ಕಲ್ಪನಾ ಸೋರೆನ್ ಅವರನ್ನು ಮುಖ್ಯಮಂತ್ರಿ ಮಾಡುವ ಯಾವುದೇ ಕ್ರಮವನ್ನು ವಿರೋಧಿಸುತ್ತೇನೆ ಎಂದು ಬಹಿರಂಗವಾಗಿ ಹೇಳಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹೇಮಂತ್ ಸೋರೆನ್ ಅವರನ್ನು ಈಡಿ ಬಂಧಿಸಿದರೆ, ಅವರ ಪತ್ನಿ ಕಲ್ಪನಾ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಮೊದಲ ಆಯ್ಕೆಯಾಗುತ್ತಾರೆ ಎಂಬ ಬಲವಾದ ವದಂತಿಗಳ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ ಎನ್ನಲಾಗಿದೆ.
ಫೋನ್ ಮೂಲಕ ಪಿಟಿಐ ಜೊತೆ ಮಾತನಾಡಿದ ಸೀತಾ ಸೊರೆನ್, ಕಲ್ಪನಾ ಸೊರೆನ್ ಅವರನ್ನು ಜೆಎಂಎಂ ಶಾಸಕಾಂಗ ಪಕ್ಷದ ನಾಯಕಿ ಮಾಡುವ ಯಾವುದೇ ಕ್ರಮವನ್ನು ತೀವ್ರವಾಗಿ ವಿರೋಧಿಸಿದರು. ಮಂಗಳವಾರ ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಮೈತ್ರಿಕೂಟದ ಶಾಸಕರ ಸಭೆಯಲ್ಲಿ ಕಲ್ಪನಾ ಸೊರೆನ್ ಕೂಡ ಭಾಗವಹಿಸಿದ್ದರು. ಸಭೆಯ ಫೋಟೋಗಳನ್ನು ಮುಖ್ಯಮಂತ್ರಿ ಕಚೇರಿಯಿಂದ ಹಂಚಿಕೊಳ್ಳಲಾಗಿತ್ತು.
"ಶಾಸಕಿಯೂ ಅಲ್ಲದ ಮತ್ತು ರಾಜಕೀಯ ಅನುಭವವಿಲ್ಲದ ಕಲ್ಪನಾ ಸೊರೆನ್ ಮಾತ್ರ ಏಕೆ ಆಯ್ಕೆ ಎಂದು ನಾನು ಕೇಳಲು ಬಯಸುತ್ತೇನೆ. ಕಲ್ಪನಾ ಮುಖ್ಯಮಂತ್ರಿ ಮಾಡುವ ಯಾವುದೇ ಕ್ರಮವನ್ನು ನಾನು ಬಲವಾಗಿ ಪ್ರತಿಭಟಿಸುತ್ತೇನೆ. ಪಕ್ಷದಲ್ಲಿ ಹಲವು ಹಿರಿಯ ನಾಯಕರಿರುವಾಗ ಕಲ್ಪನಾ ಹೆಸರನ್ನು ಮುಂದಿನ ಮುಖ್ಯಮಂತ್ರಿ ಎಂದು ಏಕೆ ಬಿಂಬಿಸಲಾಗುತ್ತಿದೆ” ಎಂದು ದಿವಂಗತ ದುರ್ಗಾ ಸೊರೆನ್ ಅವರ ಪತ್ನಿ ಸೀತಾ ಸೊರೆನ್ ಪ್ರಶ್ನಿಸಿದ್ದಾರೆ.
"ಪಕ್ಷದಲ್ಲಿ ಹಲವಾರು ಹಿರಿಯ ನಾಯಕರಿದ್ದಾರೆ, ಅವರಿಗೆ ಅಧಿಕಾರವನ್ನು ನೀಡಬಹುದು. ಅವರು ಕುಟುಂಬದಿಂದ ಆಯ್ಕೆ ಮಾಡಲು ಬಯಸಿದರೆ, ನಾನು ಮನೆಯಲ್ಲಿ ಅತ್ಯಂತ ಹಿರಿಯ ಮತ್ತು ಸುಮಾರು 14 ವರ್ಷಗಳಿಂದ ಶಾಸಕನಾಗಿದ್ದೇನೆ" ಎಂದು ಅವರು ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.
ಪಕ್ಷದ ಶಾಸಕಾಂಗ ಸಭೆಗೆ ಹಾಜರಾಗದ ಸೀತಾ ಸೊರೆನ್ ಅವರು ಕೆಲವು ವೈಯಕ್ತಿಕ ಕಾರಣಗಳಿಗಾಗಿ ನಗರದಿಂದ ಹೊರಗಿದ್ದು, ಸಂಜೆ ರಾಂಚಿ ತಲುಪಲಿದ್ದಾರೆ ಎಂದು ತಿಳಿದು ಬಂದಿದೆ. ಪಕ್ಷದ ಶಾಸಕಾಂಗ ಸಭೆಯ ವೇಳೆ ಹಲವು ಶಾಸಕರು ಗೈರು ಹಾಜರಾಗಿದ್ದರು ಎಂದು ಹೆಸರು ಉಲ್ಲೇಖಿಸಲು ಇಚ್ಛಿಸದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.