ಕಾಂಗ್ರೆಸ್ ನನ್ನನ್ನು ಉಚ್ಚಾಟಿಸುವ ಮುನ್ನವೇ ನಾನು ಪಕ್ಷವನ್ನು ತೊರೆದಿದ್ದೆ: ಸಂಜಯ್ ನಿರುಪಮ್

Update: 2024-04-04 05:35 GMT

ಹೊಸದಿಲ್ಲಿ: ಕಾಂಗ್ರೆಸ್ ನಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೊಳಗಾಗಿರುವ ಸಂಜಯ್ ನಿರುಪಮ್, ನಾನು ರಾಜಿನಾಮೆ ನೀಡಿದ ನಂತರ ಪಕ್ಷವು ನನ್ನನ್ನು ಉಚ್ಚಾಟಿಸಿದೆ ಎಂದು ಪ್ರತಿಪಾದಿಸಿದ್ದಾರೆ.

ಮುಂಬರುವ ಲೋಕಸಭಾ ಚುನಾವಣೆಗೆ ಶಿವಸೇನೆ(ಉದ್ಧವ್ ಬಣ)ಯೊಂದಿಗೆ ಸ್ಥಾನ ಹಂಚಿಕೆ ಮಾತುಕತೆ ನಡೆಸುತ್ತಿರುವ ಪಕ್ಷದ ನಾಯಕತ್ವದ ವಿರುದ್ಧ ಲೋಕಸಭೆ ಹಾಗೂ ರಾಜ್ಯಸಭೆಗಳೆರಡನ್ನೂ ಪ್ರತಿನಿಧಿಸಿರುವ ಮಾಜಿ ಸಂಸದ ಸಂಜಯ್ ನಿರುಪಮ್ ವಾಗ್ದಾಳಿ ನಡೆಸಿದ ಬೆನ್ನಿಗೇ ಕಾಂಗ್ರೆಸ್ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅವರು, ಮಲ್ಲಿಕಾರ್ಜುನ ಖರ್ಗೆಗೆ ರವಾನಿಸಿರುವ ತಮ್ಮ ರಾಜಿನಾಮೆ ಪತ್ರದ ಪ್ರತಿಯನ್ನು ಪೋಸ್ಟ್ ನೊಂದಿಗೆ ಲಗತ್ತಿಸಿದ್ದಾರೆ. “ಕಳೆದ ರಾತ್ರಿ ನನ್ನ ರಾಜಿನಾಮೆ ಪತ್ರವನ್ನು ಪಕ್ಷವು ಸ್ವೀಕರಿಸಿದ ಕೂಡಲೇ ಅವರು ನನ್ನನ್ನು ಪಕ್ಷದಿಂದ ಉಚ್ಚಾಟಿಸಲು ನಿರ್ಧರಿಸಿರುವಂತಿದೆ. ಈ ಪ್ರಾಮಾಣಿಕತೆಯನ್ನು ನೋಡಲು ಸಂತಸವಾಗುತ್ತದೆ. ಕೇವಲ ಈ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಇಂದು ಬೆಳಗ್ಗೆ 11.30ರಿಂದ ಮಧ್ಯಾಹ್ನ 12 ಗಂಟೆಯೊಳಗೆ ತಮ್ಮ ರಾಜಿನಾಮೆ ಕುರಿತು ವಿಸ್ತೃತ ವಿವರಣೆ ನೀಡುವುದಾಗಿ ಸಂಜಯ್ ನಿರುಪಮ್ ಪ್ರಕಟಿಸಿದ್ದಾರೆ.

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಮುಂಬೈನ ಆರು ಕ್ಷೇತ್ರಗಳ ಪೈಕಿ ಉತ್ತರ ಮುಂಬೈ ಲೋಕಸಭಾ ಕ್ಷೇತ್ರ ಸೇರಿದಂತೆ ನಾಲ್ಕು ಲೋಕಸಭಾ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದ ನಂತರ, ಉತ್ತರ ಮುಂಬೈ ಲೋಕಸಭಾ ಕ್ಷೇತ್ರದ ಮಾಜಿ ಸಂಸದರಾದ ಸಂಜಯ್ ನಿರುಪಮ್ ಕಾಂಗ್ರೆಸ್ ರಾಜ್ಯ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News