ಸಾವರ್ಕರ್ ಕುರಿತು ಹೇಳಿಕೆ | ಡಿ.2ರಂದು ತನ್ನ ಮುಂದೆ ಹಾಜರಾಗಲು ರಾಹುಲ್‌ಗಾಂಧಿ ಗೆ ಪುಣೆ ಕೋರ್ಟ್ ಆದೇಶ
ಪುಣೆ : ಹಿಂದುತ್ವ ಸಿದ್ಧಾಂತವಾದಿ ವಿ.ಡಿ.ಸಾವರ್ಕರ್ ಅವರ ಮೊಮ್ಮಗ ದಾಖಲಿಸಿರುವ ಮಾನಹಾನಿ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.2ರಂದು ತನ್ನ ಮುಂದೆ ಖುದ್ದಾಗಿ ಹಾಜರಾಗುವಂತೆ ಪುಣೆ ನ್ಯಾಯಾಲಯವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಆದೇಶಿಸಿದೆ.
ತಾನು ಮತ್ತು ತನ್ನ ಐದಾರು ಸ್ನೇಹಿತರು ಸೇರಿಕೊಂಡು ಮುಸ್ಲಿಮ್ ವ್ಯಕ್ತಿಯೋರ್ವನಿಗೆ ಥಳಿಸಿದ್ದೆವು ಮತ್ತು ಅದರಿಂದ ತಾನು ಸಂತೋಷಗೊಂಡಿದ್ದೆ ಎಂದು ಸಾವರ್ಕರ್ ಪುಸ್ತಕವೊಂದರಲ್ಲಿ ಬರೆದಿದ್ದಾರೆ ಎಂದು ರಾಹುಲ್ ಮಾರ್ಚ್ 2023ರಲ್ಲಿ ಲಂಡನ್ ನಲ್ಲಿ ಭಾಷಣದಲ್ಲಿ ಹೇಳಿದ್ದರು. ಆದರೆ ಸಾವರ್ಕರ್ ಹೀಗೆ ಎಲ್ಲಿಯೂ ಬರೆದಿರಲಿಲ್ಲ ಎಂದು ಅವರ ಮೊಮ್ಮಗ ಸತ್ಯಾಕಿ ಸಾವರ್ಕರ್ ದೂರಿನಲ್ಲಿ ಹೇಳಿದ್ದಾರೆ.
ನ್ಯಾಯಾಲಯದ ಆದೇಶದ ಮೇರೆಗೆ ಸತ್ಯಾಕಿಯವರ ದೂರಿನ ಕುರಿತು ತನಿಖೆ ನಡೆಸಿದ್ದ ಪೋಲಿಸರು ವರದಿಯನ್ನು ಸಲ್ಲಿಸಿದ್ದಾರೆ. ಅ.4ರಂದು ಸಂಸದರು ಮತ್ತು ಶಾಸಕರ ವಿಶೇಷ ನ್ಯಾಯಾಲಯವು ಅ.23ರಂದು ತನ್ನೆದುರು ಹಾಜರಾಗುವಂತೆ ರಾಹುಲ್‌ಗೆ ಸಮನ್ಸ್ ಹೊರಡಿಸಿತ್ತು. ಆದರೆ ಸಮನ್ಸ್ ತನಗೆ ತಲುಪಿಲ್ಲ ಎಂಬ ಕಾರಣ ನೀಡಿ ರಾಹುಲ್ ನ್ಯಾಯಾಲಯದಲ್ಲಿ ಹಾಜರಾಗಿರಲಿಲ್ಲ.
ಸೋಮವಾರ ಸತ್ಯಾಕಿ ಪರ ವಕೀಲರು ರಾಹುಲ್ ಹಾಜರಾತಿಗಾಗಿ ಸಮನ್ಸ್ ಹೊರಡಿಸುವಂತೆ ನ್ಯಾಯಾಲಯವನ್ನು ಕೋರಿಕೊಂಡಿದ್ದರು.