ತನ್ನ ವಿರುದ್ಧ ಅಪಪ್ರಚಾರಕ್ಕೆ ಬಿಜೆಪಿಯಿಂದ 500 ಕೋಟಿ ರೂ ವೆಚ್ಚ : ಸಿಎಂ ಹೇಮಂತ್ ಸೊರೇನ್
ರಾಂಚಿ : ತನ್ನ ವಿರುದ್ಧ ದುರುದ್ದೇಶಪೂರಿತ ಪ್ರಚಾರ ನಡೆಸಲು ಪ್ರತಿಪಕ್ಷ ಬಿಜೆಪಿ ರಾಜ್ಯದಲ್ಲಿ 500 ಕೋಟಿ ರೂ.ಗೂ ಅಧಿಕ ಹಣವನ್ನು ವೆಚ್ಚ ಮಾಡಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮಂಗಳವಾರ ಆರೋಪಿಸಿದ್ದಾರೆ.
ಜನರ ನಡುವೆ ದ್ವೇಷ ಪ್ರಚೋದಿಸುವ ಮೂಲಕ ರಾಜಕೀಯ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳುವುದರಲ್ಲಿ ಬಿಜೆಪಿ ನೈಪುಣ್ಯತೆ ಹೊಂದಿದೆ. ಜಾರ್ಖಂಡ್ ನ ಸಂಸ್ಕೃತಿ ಇಂತಹ ‘‘ದುರುದ್ದೇಶಪೂರಿತ ಪ್ರಚಾರ’’ಕ್ಕೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಒಂದು ಅಂದಾಜಿನ ಪ್ರಕಾರ ತನ್ನ ವಿರುದ್ಧ ಪಿಸುಮಾತಿನ, ಉತ್ತರದಾಯಿತ್ವ ರಹಿತ ಹೇಳಿಕೆಗಳ ಹಾಗೂ ದ್ವೇಷ ಪ್ರಚೋದನೆಯ ಪ್ರಚಾರಕ್ಕೆ ಬಿಜೆಪಿ 500 ಕೋಟಿ ರೂ.ಗೂ ಅಧಿಕ ವೆಚ್ಚ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಬಿಜೆಪಿ ನನ್ನ ವಿರುದ್ಧ ಅಪಪ್ರಚಾರ ಮಾಡಲು ಬಿಹಾರ, ಚತ್ತೀಸ್‌ಗಢ, ಒಡಿಶಾ ಹಾಗೂ ಬಂಗಾಳದಿಂದ ಜನರನ್ನು ಕರೆ ತರುತ್ತಿದೆ ಎಂದು ಸೊರೇನ್ ಆರೋಪಿಸಿದರು. ಇವರು ಚುನಾವಣಾ ಕಾಲದಲ್ಲಿ ರಸ್ತೆಗಳು ಹಾಗೂ ರಸ್ತೆಗಳು ಸೇರುವಲ್ಲಿ ಮತದಾರರಲ್ಲಿ ಭೀತಿ ಉಂಟು ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಬಿಹಾರ, ಚತ್ತೀಸ್‌ಗಢ, ಒಡಿಶಾ ಹಾಗೂ ಬಂಗಾಳದ ಜನರು ಕ್ಷೇತ್ರಗಳ ರಸ್ತೆಗಳು ಹಾಗೂ ರಸ್ತೆಗಳು ಸೇರುವಲ್ಲಿ ನಿಂತು ಎಲ್ಲಿ ಚುನಾವಣೆ ನಡೆಯುತ್ತವೆ ಎಂದು ಮಾತನಾಡುತ್ತಾರೆ. ಇದು ಬಿಜೆಪಿಯ ಹೊಸ ತಂತ್ರ ಇದನ್ನು ಪಿಸುಮಾತಿನ ಪ್ರಚಾರ ಎಂದು ಕರೆಯಲಾಗುತ್ತದೆ. ಇದಕ್ಕೆ ಬಿಜೆಪಿ ಪ್ರತಿ ಕ್ಷೇತ್ರದಲ್ಲಿ 1 ಕೋಟಿ ರೂ.ಗೂ ಅಧಿಕ ವೆಚ್ಚ ಮಾಡಿದೆ. ಬಿಜೆಪಿ ತಾವು ಮಾಡಿದ ಕಾರ್ಯದ ಬಗ್ಗೆ ಮಾತನಾಡುವುದಿಲ್ಲ. ಬದಲಾಗಿ ಸುಳ್ಳು ಹೇಳುವ ಮೂಲಕ ನಿಮ್ಮನ್ನು ಬೆದರಿಸುತ್ತಿದ್ದಾರೆ ಎಂದು ಅವರು ಹೇಳಿದರು.
ತನ್ನ ಹಾಗೂ ರಾಜ್ಯದ ಗೌರವಕ್ಕೆ ಧಕ್ಕೆ ಉಂಟು ಮಾಡಲು ಬಿಜೆಪಿ ಉತ್ತರದಾಯಿತ್ವ ರಹಿತ ಪ್ರಚಾರವನ್ನು ಕೂಡ ಮಾಡುತ್ತಿದೆ. ಇದಕ್ಕಾಗಿ ಅದು ವಿವಿಧ ಸಾಮಾಜಿಕ ಮಾಧ್ಯಮದ ವೇದಿಕೆಗಳಿಗೆ ಕೋಟಿಗಟ್ಟಲೆ ರೂಪಾಯಿ ವೆಚ್ಚ ಮಾಡಿದೆ. ಜಾರ್ಖಂಡ್‌ನ ಜೆಎಂಎಂ ನೇತೃತ್ವದ ಮೈತ್ರಿ ಸರಕಾರದ ವಿರುದ್ಧ ಅಪಪ್ರಚಾರ ನಡೆಸಲು 95,000ಕ್ಕೂ ಅಧಿಕ ವಾಟ್ಸ್‌ಆ್ಯಪ್ ಗುಂಪುಗಳನ್ನು ರೂಪಿಸಿದೆ ಎಂದು ಅವರು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ಈ ಆರೋಪಗಳು ಸೊರೇನ್ ಅವರ ಹತಾಶೆ, ಚುನಾವಣೆಯಲ್ಲಿ ಸೋಲುವ ಭೀತಿಯನ್ನು ಪ್ರತಿಬಿಂಬಿಸಿದೆ ಎಂದಿದೆ.