ಇಸ್ರೋದ ಜಿಸ್ಯಾಟ್-ಎನ್‌2 ಸಂವಹನ ಉಪಗ್ರಹವನ್ನು ಕಕ್ಷೆಗೆ ಸೇರಿಸಿದ ಸ್ಪೇಸ್‌ಎಕ್ಸ್

Update: 2024-11-19 14:43 GMT

PC : X/@SpaceX

ಬೆಂಗಳೂರು : ದೇಶದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-ಎನ್‌2ವನ್ನು ಎಲಾನ್ ಮಸ್ಕ್ ಮಾಲಕತ್ವದ ಸ್ಪೇಸ್ ಎಕ್ಸ್ ಅಮೆರಿಕದ ಕೇಪ್ ಕೆನಾವೆರಲ್‌ನಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಿದೆ ಎಂದು ಇಸ್ರೋದ ವಾಣಿಜ್ಯ ವಿಭಾಗ ಎನ್‌ಎಸ್‌ಐಎಲ್ ತಿಳಿಸಿದೆ.

ಫಾಲ್ಕಾನ್ 9 ರಾಕೆಟ್‌ನ ಸಹಾಯದಿಂದ 4,700 ಕಿ.ಗ್ರಾಂ. ತೂಕದ ಜಿಸ್ಯಾಟ್-ಎನ್‌2 ಹೈ-ಥ್ರೋಗ್‌ಪುಟ್ (ಎಚ್‌ಟಿಎಸ್) ಉಪಗ್ರಹವನ್ನು ನಿಗದಿತ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು ಎಂದು ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ತಿಳಿಸಿದೆ.

‘‘ಎನ್‌ಎಸ್‌ಐಎಲ್‌ನ ಜಿಸ್ಯಾಟ್-ಎನ್‌2 ಹೈ-ಥ್ರೋಗ್‌ಪುಟ್ (ಎಚ್‌ಟಿಎಸ್) ಸಂವಹನ ಉಪಗ್ರಹವನ್ನು ಅಮೆರಿಕದ ಕೇಪ್ ಕೆನಾವೆರಲ್‌ನಲ್ಲಿ 2024 ನವೆಂಬರ್ 19ರಂದು ಯಶಸ್ವಿಯಾಗಿ ಉಡಾಯಿಸಲಾಯಿತು. 4700 ಕಿ.ಗ್ರಾಂ. ತೂಕದ ಜಿಸ್ಯಾಟ್-ಎನ್‌2ವನ್ನು ನಿಗದಿತ ಜಿಯೋ-ಸಿಕ್ರೋನಸ್ ಕಕ್ಷೆ (ಜಿಟಿಒ)ಗೆ ಯಶಸ್ವಿಯಾಗಿ ಸೇರಿಸಲಾಯಿತು. ಇಸ್ರೋದ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (ಎಂಸಿಎಫ್) ಉಪಗ್ರಹದ ನಿಯಂತ್ರಣವನ್ನು ತೆಗೆದುಕೊಂಡಿದೆ. ಉಪಗ್ರಹ ಉತ್ತಮ ಸ್ಥಿತಿಯಲ್ಲಿದೆ ಎಂದು ಪ್ರಾಥಮಿಕ ದತ್ತಾಂಶ ಸೂಚಿಸಿದೆ’’ ಎಂದು ಎನ್‌ಎಸ್‌ಐಎಲ್ ತನ್ನ ‘ಎಕ್ಸ್’ನ ಪೋಸ್ಟ್‌ನಲ್ಲಿ ಹೇಳಿದೆ.

ಜಿಸ್ಯಾಟ್-ಎನ್‌2 ಕೆ-ಬ್ಯಾಂಡ್ ಹೈ ಥ್ರೋಪುಟ್ ಸಂವಹನ ಉಪಗ್ರಹವಾಗಿದ್ದು, ದೇಶದ ಬ್ರಾಡ್‌ಬ್ಯಾಂಡ್ ಸೇವೆಗಳು ಮತ್ತು ವಿಮಾನದಲ್ಲಿ ಸಂಪರ್ಕವನ್ನು ಹೆಚ್ಚಿಸುತ್ತದೆ ಎಂದು ಎನ್‌ಎಸ್‌ಐಎಲ್ ಹೇಳಿದೆ.

ಈ ಉಪಗ್ರಹ 14 ವರ್ಷಗಳ ಕಾರ್ಯಾಚರಣೆ ಅವಧಿಯನ್ನು ಹೊಂದಿದೆ. ಇದು 32 ಬಳಕೆದಾರರ ಬೀಮ್‌ಗಳನ್ನು ಹೊಂದಿದ್ದು, ಈಶಾನ್ಯ ಪ್ರದೇಶದಲ್ಲಿ 8 ಕಿರಿದಾದ ಸ್ಪಾಟ್ ಬೀಮ್‌ಗಳನ್ನು ಮತ್ತು ಭಾರತದ ಉಳಿದ ಭಾಗಗಳಲ್ಲಿ 24 ವಿಶಾಲ ಸ್ಪಾಟ್ ಬೀಮ್‌ಗಳನ್ನು ಒಳಗೊಂಡಿದೆ. ಈ 32 ಬೀಮ್‌ಗಳನ್ನು ಭಾರತದಲ್ಲಿರುವ ಹಬ್ ಸ್ಟೇಷನ್‌ಗಳು ನಿಯಂತ್ರಿಸಲಿವೆ ಎಂದು ಎನ್‌ಎಸ್‌ಐಎಲ್ ಹೇಳಿದೆ. 

Tags:    

Writer - ವಾರ್ತಾಭಾರತಿ

contributor

Editor - Mushaveer

contributor

Byline - ವಾರ್ತಾಭಾರತಿ

contributor

Similar News