ಇನ್ನೆಷ್ಟು ಸಮಯ ಮಣಿಪುರ ಉರಿಯುತ್ತಿರಬೇಕು? : ಜೈರಾಮ್ ರಮೇಶ್
ಹೊಸದಿಲ್ಲಿ : ಮಣಿಪುರ ಹೊತ್ತಿ ಉರಿಯುತ್ತಿರುವಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಾಜ್ಯದ ಮುಖ್ಯಮಂತ್ರಿ ಎನ್. ಬೀರೇಂದ್ರ ಸಿಂಗ್ ಏನು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಮಂಗಳವಾರ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಮುಖ್ಯಮಂತ್ರಿ ಇಂಫಾಲದಲ್ಲಿ ಕರೆದ ಎನ್‌ಡಿಎ ಶಾಸಕರ ಸಭೆಗೆ 46 ಶಾಸಕರ ಪೈಕಿ ಕೇವಲ 26 ಮಂದಿ ಹಾಜರಾಗಿದ್ದಾರೆ ಎಂದು ಅವರು ಹೇಳಿದರು.
‘‘ಮಣಿಪುರ ವಿಧಾನಸಭೆಯಲ್ಲಿ ಶಾಸಕರಿದ್ದಾರೆ. ನಿನ್ನೆ ರಾತ್ರಿ ಮಣಿಪುರ ಮುಖ್ಯಮಂತ್ರಿ ಇಂಫಾಲದಲ್ಲಿ ಎನ್‌ಡಿಎಗೆ ಸೇರಿದ ಎಲ್ಲಾ ಶಾಸಕರ ಸಭೆಯೊಂದನ್ನು ಕರೆದಿದ್ದರು. ಅವರನ್ನು ಹೊರತುಪಡಿಸಿ ಕೇವಲ 26 ಮಂದಿ ಹಾಜರಾಗಿದ್ದರು. ಈ ಪೈಕಿ ನಾಲ್ವರು ಎನ್‌ಪಿಪಿಗೆ ಸೇರಿದವರಾಗಿದ್ದಾರೆ. ಎನ್‌ಪಿಪಿಯ ರಾಷ್ಟ್ರೀಯ ಅಧ್ಯಕ್ಷರು ಹಾಲಿ ಮುಖ್ಯಮಂತ್ರಿಗೆ ಬೆಂಬಲ ಹಿಂದೆ ಪಡೆಯುವುದಾಗಿ ತಿಳಿಸುವ ಪತ್ರವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಈಗಾಗಲೇ ಬರೆದಿದ್ದಾರೆ’’ ಎಂದು ಜೈರಾಮ್ ರಮೇಶ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
‘‘ಗೋಡೆಯ ಮೇಲಿನ ಬರಹ ಸ್ಪಷ್ಟವಾಗಿದೆ. ಮಣಿಪುರದ ಸುತ್ರಧಾರ, ಕೇಂದ್ರ ಗೃಹ ಸಚಿವ ಇದನ್ನು ಓದಿದ್ದಾರೆಯೇ? ಅವರಿಗೆ ಪ್ರಧಾನಿಯವರು ರಾಜ್ಯದ ಎಲ್ಲಾ ಜವಾಬ್ದಾರಿಯನ್ನು ಬಿಟ್ಟುಕೊಟ್ಟಿದ್ದಾರೆ. ಮಣಿಪುರದ ಜನರ ಈ ಸಹಿಸಲಸಾಧ್ಯ ನೋವು ಇನ್ನೂ ಎಷ್ಟು ದಿನ ಮುಂದುವರಿಯಬೇಕು? ಮಣಿಪುರ ಇನ್ನೆಷ್ಟು ದಿನ ಹೀಗೆ ಉರಿಯುತ್ತಿರಬೇಕು?’’ ಎಂದು ಅವರು ಪ್ರಶ್ನಿಸಿದ್ದಾರೆ.