ನೋಯ್ಡಾ | ವಾಯು ಮಾಲಿನ್ಯದಿಂದ ಕನಿಷ್ಠ ಗೋಚರತೆ ; ಇಬ್ಬರು ಬೈಕ್ ಸವಾರರು ಮೃತ್ಯು

Update: 2024-11-19 18:01 GMT

PC : PTI

ಹೊಸದಿಲ್ಲಿ : ನೋಯ್ಡಾ ಮತ್ತು ಪಶ್ಚಿಮ ಉತ್ತರಪ್ರದೇಶದ ಇತರ ಭಾಗಗಳನ್ನು ವಾಹನಗಳ ದಟ್ಟ ಮಲಿನ ಹೊಗೆ ಆವರಿಸಿದ್ದು, ದೃಗ್ಗೋಚರತೆ ಕನಿಷ್ಠ ಮಟ್ಟಕ್ಕಿಳಿದಿದೆ. ಇದರಿಂದಾಗಿ ಸರಣಿ ಅಪಘಾತಗಳು ಸಂಭವಿಸಿದ್ದು, ಇಬ್ಬರು ಬೈಕ್ ಸವಾರರು ಮೃತಟ್ಟಿದ್ದಾರೆ ಮತ್ತು 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಬುಲಾಂದ್‌ಶಹರ್‌ನಲ್ಲಿ, ವೇಗವಾಗಿ ಚಲಿಸುತ್ತಿದ್ದ ಟ್ರಕ್ ಬೈಕೊಂದಕ್ಕೆ ಢಿಕ್ಕಿಯಾಗಿ ಅದರ ಸವಾರ ಮೃತಪಟ್ಟಿದ್ದಾರೆ. ಬದೌನ್‌ನಲ್ಲಿ ನಡೆದ ಇನ್ನೊಂದು ಅಪಘಾತದಲ್ಲಿ ಅಪರಿಚಿತ ವಾಹನವೊಂದು ಬೈಕೊಂದಕ್ಕೆ ಢಿಕ್ಕಿಯಾಗಿದೆ. ಬೈಕ್ ಸವಾರ ಶಿಕ್ಷಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ದೃಗ್ಗೋಚರತೆ ಕೊರತೆ ಹಿನ್ನೆಲೆಯಲ್ಲಿ, ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇ ಹೆದ್ದಾರಿಯಲ್ಲಿ ಕೆಟ್ಟು ನಿಂತಿದ್ದ ಟ್ರಕ್ ಒಂದಕ್ಕೆ ಹಲವು ವಾಹನಗಳು ಢಿಕ್ಕಿ ಹೊಡೆದವು. ಹಲವು ಕಾರುಗಳ ಪ್ರಯಾಣಿಕರು ಗಾಯಗೊಂಡರು. ಗಾಯಾಳುಗಳನ್ನು ಸೈಫೈ ಮೆಡಿಕಲ್ ಕಾಲೇಜು ಮತ್ತು ಶಿಕೊಹಬಾದ್ ಆಸ್ಪತ್ರೆಗೆ ಸೇರಿಸಲಾಗಿದೆ.

ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಟ್ರಕ್ಕೊಂದು ಇನ್ನೊಂದು ಟ್ರಕ್‌ಗೆ ಢಿಕ್ಕಿ ಹೊಡೆಯಿತು. ಅದು ಸರಣಿ ಅಪಘಾತಗಳಿಗೆ ಕಾರಣವಾಯಿತು. ಬಸ್ಸೊಂದು ಢಿಕ್ಕಿಯಾಗಿ ನಿಂತಿದ್ದ ಟ್ರಕ್‌ಗಳಿಗೆ ಢಿಕ್ಕಿಯಾಯಿತು. ಈ ಅಪಘಾತದಲ್ಲಿ ಸುಮಾರು 12 ಪ್ರಯಾಣಿಕರು ಗಾಯಗೊಂಡರು.

ಆಗ್ರಾ ಸಮೀಪದ ಫಿರೋಝಾಬಾದ್‌ನಲ್ಲಿ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಆರು ವಾಹನಗಳು ಢಿಕ್ಕಿಯಾದವು.

ದಿಲ್ಲಿ ವಾಯು ಮಾಲಿನ್ಯವು ಡಬ್ಲ್ಯುಎಚ್‌ಒ ಮಿತಿಗಿಂತ 60 ಪಟ್ಟು ಅಧಿಕ

 ಮಂಗಳವಾರ ದಿಲ್ಲಿ ವಾಯುವಿನ ‘ಪಿಎಮ್‌2.5’ ಮಲಿನಕಾರಕಗಳ ಮಟ್ಟ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ದೈನಂದಿನ ಅನುಮೋದಿತ ಮಿತಿಗಿಂತ 60 ಪಟ್ಟು ಹೆಚ್ಚಾಗಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆಯ ವರದಿಯೊಂದು ತಿಳಿಸಿದೆ.

ಮಂಗಳವಾರ ದಿಲ್ಲಿಯ ಸರಾಸರಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ)ವು 488 ಆಗಿತ್ತು. ಇದು ‘ಸೀವಿಯರ್ ಪ್ಲಸ್’ ವಿಭಾಗದಲ್ಲಿ ಬರುತ್ತದೆ.

ಪಿಎಮ್‌2.5 ಮಲಿನಕಾರಕಗಳೆಂದರೆ ಕ್ಯಾನ್ಸರ್‌ಗೆ ಕಾರಣವಾಗುವ ಸೂಕ್ಷ್ಮ ಕಣಗಳು. ಅವುಗಳು ಶ್ವಾಸಕೋಶಗಳ ಮೂಲಕ ಮಾನವರ ರಕ್ತನಾಳವನ್ನು ಪ್ರವೇಶಿಸುತ್ತವೆ. ಅವುಗಳು ಗಂಭೀರ ಹೃದಯದ ಕಾಯಿಲೆಗಳು, ಶ್ವಾಸಕೋಶದ ಕಾಯಿಲೆಗಳು ಮತ್ತು ವ್ಯಕ್ತಿಯ ಗ್ರಹಿಕೆ ಸಾಮರ್ಥ್ಯದ ಕುಸಿತಕ್ಕೂ ಕಾರಣವಾಗುತ್ತವೆ.

Full View

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News