ಅಬಕಾರಿ ನೀತಿ ಹಗರಣ ಪ್ರಕರಣ: ಕೆ. ಕವಿತಾಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಕಾರ
ಹೊಸದಿಲ್ಲಿ: ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ಈಡಿ) ಬಂಧನಕ್ಕೊಳಗಾಗಿರುವ ಬಿಆರ್ ಎಸ್ ನಾಯಕಿ ಕೆ ಕವಿತಾ ಅವರಿಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಎಂಎಂ ಸುಂದ್ರೇಶ್ ಮತ್ತು ಬೇಲಾ ಎಂ ತ್ರಿವೇದಿ ಅವರ ಪೀಠವು ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಕವಿತಾ ಅವರಿಗೆ ಸೂಚಿಸಿದೆ.
“ಸುಪ್ರೀಂ ಕೋರ್ಟ್ ಎಲ್ಲರಿಗೂ ಏಕರೂಪದ ನೀತಿಯನ್ನು ಅನುಸರಿಸಬೇಕು, ರಾಜಕೀಯ ವ್ಯಕ್ತಿಗಳು ನೇರವಾಗಿ ಸುಪ್ರೀಂ ಕೋರ್ಟ್ ಗೆ ತೆರಳಲು ಶಕ್ತರಾಗಿರುವುದರಿಂದ ಜಾಮೀನಿಗಾಗಿ ನೇರವಾಗಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು ಅನುಮತಿಸಲಾಗುವುದಿಲ್ಲ” ಎಂದು ಕೋರ್ಟ್ ಹೇಳಿದೆ.
ಆದಾಗ್ಯೂ, ಜಾಮೀನು ಅರ್ಜಿ ಸಲ್ಲಿಸಿದರೆ ವಿಚಾರಣಾ ನ್ಯಾಯಾಲಯವು ತ್ವರಿತವಾಗಿ ತೀರ್ಮಾನಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ನಿಬಂಧನೆಗಳನ್ನು ಪ್ರಶ್ನಿಸಿ ಕವಿತಾ ಸಲ್ಲಿಸಿರುವ ಮನವಿಗೆ ಸಂಬಂಧಿಸಿದಂತೆ ಆರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಈಡಿಗೆ ನ್ಯಾಯಾಲಯವು ನೋಟಿಸ್ ನೀಡಿದೆ.