ಶಾಲೆಯು ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಮುಚ್ಚಿಹಾಕಲು ಯತ್ನಿಸಿತು : ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮುಖ್ಯಸ್ಥೆ
ಥಾಣೆ : ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಬದ್ಲಾಪುರದಲ್ಲಿರುವ ಶಾಲೆಯೊಂದರ ನರ್ಸರಿ ವಿಭಾಗದಲ್ಲಿ ಕಲಿಯುತ್ತಿರುವ ಇಬ್ಬರು ಬಾಲಕಿಯರ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣವನ್ನು ಶಾಲೆಯ ಆಡಳಿತ ಮಂಡಳಿಯು ನಿಭಾಯಿಸಿದ ರೀತಿಯನ್ನು ಮಹಾರಾಷ್ಟ್ರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎಮ್‌ಎಸ್‌ಸಿಪಿಸಿಆರ್)ದ ಅಧ್ಯಕ್ಷೆ ಸುಸೈಬೇನ್ ಶಾ ಬುಧವಾರ ಟೀಕಿಸಿದ್ದಾರೆ. ಶಾಲಾ ಆಡಳಿತ ಮಂಡಳಿಯು ಪೊಲೀಸ್ ದೂರು ನೀಡುವಲ್ಲಿ ಸಂತ್ರಸ್ತ ಬಾಲಕಿಯರ ಕುಟುಂಬಗಳಿಗೆ ಬೆಂಬಲ ನೀಡುವ ಬದಲು, ಅಪರಾಧವನ್ನು ಮುಚ್ಚಿಹಾಕಲು ಪ್ರಯತ್ನಿಸಿತು ಎಂದು ಅವರು ಹೇಳಿದ್ದಾರೆ.
ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ (ಪೋಕ್ಸೊ) ಕಾಯ್ದೆಯಡಿ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕಾಗಿದೆ ಎಂದು ಅವರು ಹೇಳಿದ್ದಾರೆ.
‘‘ಅವರು (ಮಕ್ಕಳ ರಕ್ಷಣಾ ಘಟಕ) ದೂರು ಸಲ್ಲಿಸಲು ಮಕ್ಕಳನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ನಾನು ಪ್ರಕರಣದ ಬಗ್ಗೆ ಶಾಲಾ ಆಡಳಿತ ಮಂಡಳಿಯನ್ನು ಪ್ರಶ್ನಿಸಿದಾಗ, ಅವರು ಮುಚ್ಚಿಹಾಕಲು ಪ್ರಯತ್ನಿಸಿದರು. ಶಾಲಾ ಆಡಳಿತ ಮಂಡಳಿಯ ವಿರುದ್ಧವೂ ಯಾಕೆ ಪೋಕ್ಸೊ ಪ್ರಕರಣ ದಾಖಲಿಸಬಾರದು ಎಂಬುದಾಗಿಯೂ ನಾನು ಕೇಳಬೇಕಾಯಿತು’’ ಎಂದು ಶಾ ಹೇಳಿದರು.
ಇಬ್ಬರು ನಾಲ್ಕು ವರ್ಷ ಪ್ರಾಯದ ಬಾಲಕಿಯರ ಮೇಲೆ ಶೌಚಾಲಯದಲ್ಲಿ ಸ್ಚಚ್ಛತಾ ಕಾರ್ಮಿಕನೊಬ್ಬ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಆರೋಪಿಯನ್ನು 23 ವರ್ಷದ ಅಕ್ಷಯ್ ಶಿಂದೆ ಎಂಬುದಾಗು ಗುರುತಿಸಲಾಗಿದೆ. ಶಾಲೆಯು ಕೇವಲ 10 ದಿನಗಳ ಹಿಂದೆ ಆರೋಪಿಯನ್ನು ನೇಮಕಗೊಳಿಸಿದೆ ಎನ್ನಲಾಗಿದೆ. ಆರೋಪಿಯು ಬಾಲಕಿಯರ ಮೇಲೆ ಬೇರೆ ಬೇರೆ ದಿನ ದೌರ್ಜನ್ಯ ನಡೆಸಿದ್ದಾನೆ ಎನ್ನಲಾಗಿದೆ.
► ಶಾಲೆ, ಪೊಲೀಸರ ಉಡಾಫೆಯ ಪ್ರತಿಕ್ರಿಯೆ
ಲೈಂಗಿಕ ದೌರ್ಜನ್ಯದ ಮೊದಲ ಪ್ರಕರಣದ ಬಗ್ಗೆ ಆಗಸ್ಟ್ 12ರಂದು ಮಾಹಿತಿ ನೀಡಲಾಗಿದ್ದರೂ, ಶಾಲಾ ಆಡಳಿತ ಮಂಡಳಿಯು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದು ಆರೋಪಿಸಲಾಗಿದೆ. ಬದಲಿಗೆ, ಮಗುವಿನ ಮೇಲೆ ಹೊರಗಿನವರು ಯಾರೋ ಹಲ್ಲೆ ನಡೆಸಿರಬಹುದು ಎಂಬ ಉಡಾಫೆಯ ಪ್ರತಿಕ್ರಿಯೆಯನ್ನು ಆಡಳಿತ ಮಂಡಳಿಯು ನೀಡಿತ್ತು ಎನ್ನಲಾಗಿದೆ.
ಅದೂ ಅಲ್ಲದೆ, ಬದ್ಲಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಮೊದಲು ಸಂತ್ರಸ್ತ ಬಾಲಕಿಯರ ಹೆತ್ತವರನ್ನು 11 ಗಂಟೆ ಕಾಯುವಂತೆ ಮಾಡಲಾಯಿತು ಎನ್ನಲಾಗಿದೆ.
ಶಾಲಾ ಆಡಳಿತ ಮಂಡಳಿ ಮತ್ತು ಪೊಲೀಸರ ನಿರ್ಲಕ್ಷದಿಂದ ರೋಸಿ ಹೋದ ಹೆತ್ತವರು ಮತ್ತು ಸ್ಥಳೀಯರು ಮಂಗಳವಾರ ನ್ಯಾಯಕ್ಕಾಗಿ ಆಗ್ರಹಿಸಿ ರಸ್ತೆ ಮತ್ತು ರೈಲು ಹಳಿಗಳಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಶಾಲೆಯಲ್ಲಿ ಆರಂಭವಾದ ಪ್ರತಿಭಟನೆಯು ಕ್ಷಿಪ್ರವಾಗಿ ಬದ್ಲಾಪುರ ರೈಲು ನಿಲ್ದಾಣಕ್ಕೆ ಸ್ಥಳಾಂತರಗೊಂಡಿತು. ಬೃಹತ್ ಸಂಖ್ಯೆಯ ಪ್ರತಿಭಟನಾಕಾರರು ಬೆಳಗ್ಗಿನಿಂದ ಸಂಜೆಯವರೆಗೆ ರೈಲುಗಳ ಸಂಚಾರವನ್ನು ತಡೆಹಿಡಿದರು.
ಶಾಲಾ ಆಡಳಿತವು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರೆ, ಬದ್ಲಾಪುರ ರೈಲು ನಿಲ್ದಾಣದಲ್ಲಿ ನಡೆದ ಸಂಘರ್ಷಕಾರಿ ಪರಿಸ್ಥಿತಿಯನ್ನು ನಿವಾರಿಸಬಹುದಾಗಿತ್ತು ಎಂದು ಸುಸೈ ಬೇನ್ ಶಾ ಅಭಿಪ್ರಾಯಪಟ್ಟರು.
‘‘ಲೈಂಗಿಕ ದೌರ್ಜನ್ಯದ ಬಗ್ಗೆ ವಿವರಿಸಿದ ಬಳಿಕವೂ, ಪ್ರಾಂಶುಪಾಲರು ಪೊಲೀಸರನ್ನು ಸಂಪರ್ಕಿಸಲಿಲ್ಲ. ಬದಲಿಗೆ ಅವರು ಶಾಲಾ ಆಡಳಿತ ಮಂಡಳಿಯನ್ನು ಸಂಪರ್ಕಿಸಿದರು’’ ಎಂದು ಶಾ ಹೇಳಿದರು. ‘‘ಅದೊಂದು ಭಯಾನಕ ಬೆಳವಣಿಗೆಗಳ ಘಟನೆಯಾಗಿತ್ತು’’ ಎಂದರು.
► 24ರಂದು ಮಹಾರಾಷ್ಟ್ರ ಬಂದ್
ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಘಟನೆಗಳು ಮತ್ತು ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಆಗಿರುವ ಹೆಚ್ಚಳವನ್ನು ಖಂಡಿಸಿ ಮಹಾರಾಷ್ಟ್ರದ ಪ್ರತಿಪಕ್ಷ ಮಹಾ ವಿಕಾಸ ಅಘಾಡಿಯು ಆಗಸ್ಟ್ 24ರಂದು ‘ಮಹಾರಾಷ್ಟ್ರ ಬಂದ್’ಗೆ ಕರೆ ನೀಡಿದೆ.
ಅಘಾಡಿಯ ಎಲ್ಲಾ ಮಿತ್ರಪಕ್ಷಗಳು ಬಂದ್‌ನಲ್ಲಿ ಪಾಲ್ಗೊಳ್ಳುತ್ತವೆ ಎಂದು ರಾಜ್ಯ ವಿಧಾನಸಭೆಯ ಪ್ರತಿಪಕ್ಷ ನಾಯಕ ವಿಜಯ ವಡೆತ್ತಿವಾರ್ ತಿಳಿಸಿದರು.
ಬುಧವಾರ ನಡೆದ ಮಹಾ ವಿಕಾಸ ಅಘಾಡಿಯ ಸಭೆಯಲ್ಲಿ ಕಾಂಗ್ರೆಸ್, ಶಿವಸೇನೆ (ಉದ್ಧವ್ ಬಾಳಾ ಠಾಕ್ರೆ) ಮತ್ತು ಎನ್‌ಸಿಪಿಯ ನಾಯಕರು ಬದ್ಲಾಪುರ ಘಟನೆ ಮತ್ತು ರಾಜ್ಯದಲ್ಲಿ ಮಹಿಳೆಯರು ಮತ್ತು ಬಾಲಕಿಯರ ಒಟ್ಟಾರೆ ಸುರಕ್ಷತೆ ಬಗ್ಗೆ ಚರ್ಚಿಸಿದರು.
► ಆರೋಪಿಗೆ 26ರವರೆಗೆ ಪೊಲೀಸ್ ಕಸ್ಟಡಿ
ಸ್ಥಳೀಯ ನ್ಯಾಯಾಲಯವೊಂದು ಬುಧವಾರ ಆರೋಪಿ ಅಕ್ಷಯ್ ಶಿಂದೆಯ ಪೊಲೀಸ್ ಕಸ್ಟಡಿಯನ್ನು ಆಗಸ್ಟ್ 26ರವರೆಗೆ ವಿಸ್ತರಿಸಿದೆ. ಆರೋಪಿಯನ್ನು ಬೆಳಗ್ಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಜಿಲ್ಲೆಯ ಕಲ್ಯಾಣ್ ನಲ್ಲಿರುವ ಮ್ಯಾಜಿಸ್ಟ್ರೇಟರ ಸಮ್ಮುಖದಲ್ಲಿ ಹಾಜರುಪಡಿಸಲಾಯಿತು.
ಪೊಲೀಸರು ಆರೋಪಿಯನ್ನು ಆಗಸ್ಟ್ 17ರಂದು ಬಂಧಿಸಿದ್ದರು. ಈ ನಡುವೆ, ಆರೋಪಿಯ ಪರವಾಗಿ ವಾದ ನಡೆಸದಿರಲು ಕಲ್ಯಾಣ್ ವಕೀಲರ ಸಂಘವು ನಿರ್ಧರಿಸಿದೆ.
ಬುಧವಾರ ಬದ್ಲಾಪುರದಲ್ಲಿ ಇಂಟರ್‌ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಬದ್ಲಾಪುರದ ಹೆಚ್ಚಿನ ಶಾಲೆಗಳು ಮುಚ್ಚಿದ್ದವು.
► 25 ಪೊಲೀಸರಿಗೆ ಗಾಯ; 72 ಮಂದಿಯ ಬಂಧನ
ಬದ್ಲಾಪುರದ ಶಾಲೆಯೊಂದರ ಇಬ್ಬರು ನರ್ಸರಿ ಬಾಲಕಿಯರ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯದ ವಿರುದ್ಧ ಹೆತ್ತವರು ಮತ್ತು ಸ್ಥಳೀಯರು ಮಂಗಳವಾರ ಸ್ಥಳೀಯ ರೈಲು ನಿಲ್ದಾಣದಲ್ಲಿ ನಡೆಸಿದ ಹಿಂಸಾತ್ಮಕ ಪ್ರತಿಭಟನೆಯ ವೇಳೆ ಕನಿಷ್ಠ 17 ಸ್ಥಳೀಯ ಪೊಲೀಸರು ಮತ್ತು 8 ರೈಲ್ವೇ ಪೊಲೀಸರು ಗಾಯಗೊಂಡಿದ್ದಾರೆ.
ಹಿಂಸಾತ್ಮಕ ಘಟನೆಗಳಿಗೆ ಸಂಬಂಧಿಸಿ ಪೊಲೀಸರು 72 ಮಂದಿಯನ್ನು ಬಂಧಿಸಿದ್ದಾರೆ ಮತ್ತು 300ಕ್ಕೂ ಅಧಿಕ ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಕಾನೂನು ಮತ್ತು ವ್ಯವಸ್ಥೆ ಪರಿಸ್ಥಿತಿಯನ್ನು ನಿಭಾಯಿಸಲು ಬದ್ಲಾಪುರದಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಈಗ ಅಲ್ಲಿನ ಪರಿಸ್ಥಿತಿ ನಿಧಾನವಾಗಿ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ.