ಇವಿಎಂ ಸಾಫ್ಟ್‌ವೇರ್‌ನ ಪರಿಶೋಧನೆ: ಪಿಐಎಲ್ ತಿರಸ್ಕರಿಸಿದ ಸುಪ್ರೀಂಕೋರ್ಟ್
ಹೊಸದಿಲ್ಲಿ: ಚುನಾವಣಾ ಆಯೋಗದ ಇಲೆಕ್ಟ್ರಾನಿಕ್ ಮತದಾನ ಯಂತ್ರ (ಇವಿಎಂ)ಗಳಲ್ಲಿ ಬಳಕೆಯಾಗುತ್ತಿರುವ ಸಾಫ್ಟ್‌ವೇರ್‌ನ ಪರಿಶೋಧನೆ ನಡೆಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಪುರಸ್ಕರಿಸಲು ಸುಪ್ರೀಂಕೋರ್ಟ್ ಶುಕ್ರವಾರ ನಿರಾಕರಿಸಿದೆ.
ತನಗೆ ಸಲ್ಲಿಸಲಾದ ದಾಖಲೆಗಳಲ್ಲಿ ಚುನಾವಣೆಯನ್ನು ನಡೆಸುವಲ್ಲಿ ಚುನಾವಣಾ ಆಯೋಗವು ಸಾಂವಿಧಾನಿಕ ಜನಾದೇಶದ ಉಲ್ಲಂಘಿಸಿದೆಯೆಂಬುದಕ್ಕೆ ಯಾವುದೇ ಪುರಾವೆಗಳಿಲ್ಲವೆಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.
“ಚುನಾವಣೆಗಳನ್ನು ನಿಯಂತ್ರಿಸುವ ಹೊಣೆಗಾರಿಕೆಯನ್ನು ಚುನಾವಣಾ ಆಯೋಗಕ್ಕೆ ವಹಿಸಿಕೊಡಲಾಗಿದೆ. ಪ್ರಸಕ್ತ ಚುನಾವಣಾ ಆಯೋಗವು ಮತದಾನ ನಡೆಸುವ ಪ್ರಕ್ರಿಯೆಯಲ್ಲಿ ಸಾಂವಿಧಾನಿಕ ಜನಾದೇಶವನ್ನು ಉಲ್ಲಂಘಿಸಿದ್ದಾರೆಂಬುದನ್ನು ಸಾಬೀತುಪಡಿಸುವ ಯಾವುದೇ ಕ್ರಮಕ್ಕೆ ಅರ್ಹವಾದ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಇವಿಎಂಗಳ ಮೇಲೆ ಸಂದೇಹವನ್ನು ಮೂಡಿಸುವ ಯಾವುದೇ ದಾಖಲೆಗಳು ನಮ್ಮ ಮುಂದಿಲ್ಲ’’ ಎಂದು ನ್ಯಾಯಪೀಠ ತಿಳಿಸಿದೆ.
ಇವಿಎಂಗಳ ಸೋರ್ಸ್ ಕೋಡ್ (ಮೂಲಸಂಕೇತ)ಗಳ ಸ್ವತಂತ್ರ ಪರಿಶೋಧನೆಯಾಗಬೇಕೆಂದು ಸುನೀಲ್ ಅಹ್ಯಾ ಎಂಬವರು ಸುಪ್ರೀಂಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ಸಲ್ಲಿಸಿದ್ದರು.
ಸೋರ್ಸ್ ಕೋಡ್ ಎಂಬುದು ಇವಿಎಂನ ಮಿದುಳಾಗಿದ್ದು, ಪ್ರಜಾಪ್ರಭುತ್ವದ ಉಳಿವು ಅದನ್ನು ಅವಲಂಭಿಸಿದೆ ಎಂದು ಅಹ್ಯಾ ತನ್ನ ಅರ್ಜಿಯಲ್ಲಿ ನಿವೇದಿಸಿದ್ದರು.