ಅನಿಲ್ ಅಂಬಾನಿಗೆ ಶೇರು ಮಾರುಕಟ್ಟೆಯಿಂದ 5 ವರ್ಷಗಳ ನಿಷೇಧ; 25 ಕೋಟಿ ರೂ.ದಂಡ

Update: 2024-08-23 09:20 GMT

ಅನಿಲ್ ಅಂಬಾನಿ‌ (Photo: PTI)

ಹೊಸದಿಲ್ಲಿ: ಕೈಗಾರಿಕೋದ್ಯಮಿ ಅನಿಲ್ ಅಂಬಾನಿ ಮತ್ತು ರಿಲಯನ್ಸ್ ಹೋಮ್ ಫೈನಾನ್ಸ್ ಲಿ.(ಆರ್‌ಎಚ್‌ಎಫ್‌ಎಲ್)ನ ಪ್ರಮುಖ ಮಾಜಿ ಅಧಿಕಾರಿಗಳು ಸೇರಿದಂತೆ 24 ಇತರ ಸಂಸ್ಥೆಗಳಿಗೆ ಶೇರು ಮಾರುಕಟ್ಟೆಯಿಂದ ಐದು ವರ್ಷಗಳ ಅವಧಿಗೆ ನಿಷೇಧಿಸಿರುವ ಸೆಬಿ,‌ ಅಂಬಾನಿಗೆ 25 ಕೋಟಿ ರೂ.ಗಳ ದಂಡವನ್ನು ವಿಧಿಸಿದೆ. ಆರ್‌ಎಚ್‌ಎಫ್‌ಎಲ್‌ನಿಂದ ಹಣದ ದುರ್ಬಳಕೆ ಆರೋಪಗಳ ಕುರಿತು ವಿವರವಾದ ತನಿಖೆಯು ಅಂಬಾನಿ ಮತ್ತು ಅವರ ಸಹಚರರು ರೂಪಿಸಿದ್ದ ವಂಚಕ ಯೋಜನೆಯನ್ನು ಬಯಲುಗೊಳಿಸಿದ ಬಳಿಕ ಸೆಬಿ ಈ ನಿರ್ಧಾರವನ್ನು ಕೈಗೊಂಡಿದೆ.

ಅಂಬಾನಿ ಹೇಗೆ ಅನಿಲ್ ಧೀರುಭಾಯಿ ಅಂಬಾನಿ ಗ್ರೂಪ್‌ನ ಅಧ್ಯಕ್ಷರಾಗಿ ತನ್ನ ಹುದ್ದೆಯ ಮತ್ತು ಎಚ್‌ಎಫ್‌ಎಲ್ ಮೇಲಿನ ತನ್ನ ಪರೋಕ್ಷ ನಿಯಂತ್ರಣದ ಲಾಭ ಪಡೆದುಕೊಂಡು ಪ್ರಮುಖ ವ್ಯವಸ್ಥಾಪಕ ಸಿಬ್ಬಂದಿಗಳ ಸಹಭಾಗಿತ್ವದೊಂದಿಗೆ ಕಂಪನಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದರು ಎನ್ನುವುದನ್ನು ಸೆಬಿ ತನ್ನ 222 ಪುಟಗಳ ಆದೇಶದಲ್ಲಿ ವಿವರಿಸಿದೆ. ಈ ಹಣವನ್ನು ಆರ್ಥಿಕವಾಗಿ ಲಾಭದಾಯಕವಲ್ಲದ ಮತ್ತು ಸಾಕಷ್ಟು ಆಸ್ತಿಗಳು ಅಥವಾ ಆದಾಯವನ್ನು ಹೊಂದಿರದ ಅಂಬಾನಿಗೆ ಸಂಬಂಧಿಸಿದ ಸಂಸ್ಥೆಗಳಿಗೆ ನೀಡಲಾಗಿದ್ದ ಸಾಲಗಳನ್ನಾಗಿ ತೋರಿಸಲಾಗಿತ್ತು.

ಆರ್‌ಎಚ್‌ಎಫ್‌ಎಲ್‌ನ ಸಂಪನ್ಮೂಲಗಳ ಸಂಭಾವ್ಯ ದುರುಪಯೋಗದ ಕುರಿತು ಹಲವಾರು ದೂರುಗಳು ಮತ್ತು ವರದಿಗಳ ಹಿನ್ನೆಲೆಯಲ್ಲಿ ಸೆಬಿ 2018-19ರ ಅವಧಿಯ ಹಣಕಾಸು ವ್ಯವಹಾರಗಳ ಬಗ್ಗೆ ತನಿಖೆಯನ್ನು ಕೈಗೊಂಡಿತ್ತು. ತನಿಖೆಯು ಆರ್‌ಎಚ್‌ಎಫ್‌ಎಲ್‌ನ ಕಾರ್ಪೊರೇಟ್ ಆಡಳಿತದಲ್ಲಿ ಸ್ಪಷ್ಟ ವೈಫಲ್ಯವನ್ನು ಎತ್ತಿ ತೋರಿಸಿದೆ. ಅಂಬಾನಿಯ ಪ್ರಭಾವದಿಂದಾಗಿ ಕಂಪನಿಯ ವ್ಯವಸ್ಥಾಪಕ ಅಧಿಕಾರಿಗಳು ಪ್ರಶ್ನಾರ್ಹ ಸಾಲಗಳನ್ನು ನೀಡುವುದನ್ನು ನಿಲ್ಲಿಸುವಂತೆ ನಿರ್ದೇಕರ ಮಂಡಳಿಯು ನೀಡಿದ್ದ ನಿರ್ದೇಶನಗಳನ್ನು ನಿರ್ಲಕ್ಷಿಸಿದ್ದರು. ಕಂಪನಿಯು ಸೆಬಿಗೆ ಸಂಬಂಧಿಸಿದ ಹಲವು ಕಾಯ್ದೆಗಳು ಮತ್ತು ನಿಯಮಗಳನ್ನು ಉಲ್ಲಂಘಿಸಿತ್ತು.

ಕಂಪನಿಯಿಂದ ಸಾಲಗಳನ್ನು ಸ್ವೀಕರಿಸಿದ್ದ ಅನೇಕ ಸಂಸ್ಥೆಗಳು ಹೆಚ್ಚಾಗಿ ಆರ್‌ಎಚ್‌ಎಫ್‌ಎಲ್‌ನ ಪ್ರವರ್ತಕರೊಂದಿಗೆ ಸಂಬಂಧವನ್ನು ಹೊಂದಿದ್ದು,ಸಾಲವನ್ನು ಮರುಪಾವತಿಸುವಲ್ಲಿ ವಿಫಲಗೊಂಡಿದ್ದವು ಮತ್ತು ಇದರಿಂದಾಗಿ ಆರ್‌ಎಚ್‌ಎಫ್‌ಎಲ್ ತನ್ನ ಸ್ವಂತ ಸಾಲವನ್ನು ಮರುಪಾವತಿಸಲಾಗದೇ ಸುಸ್ತಿದಾರನಾಗಿತ್ತು ಎಂದು ಸೆಬಿ ತನ್ನ ಆದೇಶದಲ್ಲಿ ಬೆಟ್ಟು ಮಾಡಿದೆ.

ಹಗರಣದಲ್ಲಿಯ ಪಾತ್ರಕ್ಕಾಗಿ ಅನಿಲ ಅಂಬಾನಿಗೆ 25 ಕೋಟಿ ರೂ.ಗಳ ದಂಡವನ್ನು ವಿಧಿಸಿರುವ ಸೆಬಿ, ಅವರು ಮುಂದಿನ ಐದು ವರ್ಷಗಳ ಕಾಲ ಸೆಬಿ ನೋಂದಾಯಿತ ಯಾವುದೇ ಲಿಸ್ಟೆಡ್ ಕಂಪನಿಯಲ್ಲಿ ಅಥವಾ ಮಧ್ಯವರ್ತಿ ಸಂಸ್ಥೆಯಲ್ಲಿ ನಿರ್ದೇಶಕ ಅಥವಾ ಪ್ರಮುಖ ವ್ಯವಸ್ಥಾಪಕ ಅಧಿಕಾರಿಯಾಗಿ ಯಾವುದೇ ಹುದ್ದೆಯನ್ನು ಹೊಂದಿರುವುದನ್ನು ನಿಷೇಧಿಸಿದೆ. ಆರ್‌ಎಚ್‌ಎಫ್‌ಎಲ್‌ನ್ನೂ ಸೆಕ್ಯೂರಿಟಿ ಮಾರುಕಟ್ಟೆಯಿಂದ ಆರು ತಿಂಗಳ ಅವಧಿಗೆ ನಿಷೇಧಿಸಲಾಗಿದ್ದು,ಆರು ಲಕ್ಷ ರೂ.ಗಳ ದಂಡವನ್ನು ವಿಧಿಸಲಾಗಿದೆ.

ತನಿಖೆಯು ದುರ್ಬಳಕೆ ಮಾಡಿಕೊಳ್ಳಲಾಗಿದ್ದ ಹಣವನ್ನು ನೇರವಾಗಿ ಸ್ವೀಕರಿಸಿದ್ದ ಅಥವಾ ಮಧ್ಯವರ್ತಿಗಳಾಗಿ ದುರ್ಬಳಕೆಗೆ ನೆರವಾಗಿದ್ದ ಹಲವಾರು ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನೂ ಗುರುತಿಸಿದೆ. ಆರ್‌ಎಚ್‌ಎಫ್‌ಎಲ್‌ನ ಮಾಜಿ ಅಧಿಕಾರಿಗಳಾದ ಅಮಿತ್ ಬಾಪ್ನಾ, ರವೀಂದ್ರ ಸುಧಾಕರ ಮತ್ತು ಪಿಂಕೇಶ ಶಾ ಅವರಿಗೆ ಅನುಕ್ರಮವಾಗಿ 27 ಕೋಟಿ ರೂ.,26 ಕೋಟಿ ರೂ. ಮತ್ತು 21 ಕೋಟಿ ರೂ.ಗಳ ದಂಡವನ್ನು ವಿಧಿಸಲಾಗಿದೆ.

ರಿಲಯನ್ಸ್ ಯುನಿಕಾರ್ನ್ ಎಂಟರ್‌ಪ್ರೈಸಸ್,ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಲಿ. ಮತ್ತು ರಿಲಯನ್ಸ್ ಬಿಗ್ ಎಂಟರ್‌ಟೇನ್‌ಮೆಂಟ್ ಪ್ರೈ.ಲಿ.ನಂತಹ ಅಂಬಾನಿಯ ಉದ್ಯಮ ಸಾಮ್ರಾಜ್ಯದೊಂದಿಗೆ ಗುರುತಿಸಿಕೊಂಡಿದ್ದ ಇತರ ಸಂಸ್ಥೆಗಳಿಗೂ ತಲಾ 25 ಕೋ.ರೂ.ಗಳ ದಂಡವನ್ನು ವಿಧಿಸಲಾಗಿದೆ.

ಸೆಬಿ ಈಗಾಗಲೇ ಫೆ.2022ರಲ್ಲಿ ಅನಿಲ್ ಅಂಬಾನಿ ಮತ್ತು ಇತರ ಮೂವರನ್ನು ಸೆಕ್ಯೂರಿಟಿ ಮಾರುಕಟ್ಟೆಯಿಂದ ನಿಷೇಧಿಸಿತ್ತು. ಈಗಿನ ಅಂತಿಮ ಆದೇಶವು ಈ ನಿರ್ಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸಿದೆ.

ಶುಕ್ರವಾರ ಶೇರು ಮಾರುಕಟ್ಟೆಗಳಲ್ಲಿ ಆರ್‌ಎಚ್‌ಎಫ್‌ಎಲ್ ಶೇರುಗಳು ಶೇ.5.12ರಷ್ಟು ಕುಸಿದಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News