ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ಅವರ ಸೊಸೆ ಬಿಜೆಪಿಗೆ ಸೇರ್ಪಡೆ
ಮುಂಬೈ: ಮಾಜಿ ಲೋಕಸಭಾ ಸ್ಪೀಕರ್ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಶಿವರಾಜ್ ಪಾಟೀಲ್ ರ ಸೊಸೆ ಅರ್ಚನಾ ಪಾಟೀಲ್ ಚಕುರ್ಕರ್ ಇಂದು ಬಿಜೆಪಿ ಸೇರ್ಪಡೆಯಾದರು.
ಅರ್ಚನಾ ಪಾಟೀಲ್ ಉದ್ಗೀರ್ ನಲ್ಲಿರುವ ಲೈಫ್ ಕೇರ್ ಹಾಸ್ಪಿಟಲ್ ಆ್ಯಂಡ್ ರಿಸರ್ಚ್ ಸೆಂಟರ್ ನ ಅಧ್ಯಕ್ಷೆಯಾಗಿದ್ದು, ಅವರ ಪತಿ ಶೈಲೇಶ್ ಪಾಟೀಲ್ ಚಂದುರ್ಕರ್ ರಾಜ್ಯ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿದ್ದಾರೆ.
ಔಪಚಾರಿಕ ಕಾರ್ಯಕ್ರಮದಲ್ಲಿ ಬಿಜೆಪಿಗೆ ಸೇರ್ಪಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅರ್ಚನಾ ಪಾಟೀಲ್, “ರಾಜಕೀಯ ವಲಯದಲ್ಲಿ ಕೆಲಸ ಮಾಡಲು ನಾನು ಬಿಜೆಪಿ ಸೇರ್ಪಡೆಯಾಗಿದ್ದೇನೆ. ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿರುವ ನಾರಿ ಶಕ್ತಿ ವಂದನ ಅಧಿನಿಯಮದಿಂದ ನಾನು ಭಾರಿ ಪ್ರಭಾವಿತಳಾಗಿದ್ದೇನೆ. ಇದರಿಂದ ಮಹಿಳೆಯರಿಗೆ ಸಮಾನ ಅವಕಾಶ ದೊರೆಯಲಿದೆ” ಎಂದು ಹೇಳಿದರು.
ಕಳೆದ ಸೋಮವಾರ ಶಿವರಾಜ್ ಪಾಟೀಲ್ ಅವರ ನಿಕಟವರ್ತಿಯಾದ ಬಸವರಾಜ್ ಮುರುಮ್ಕರ್ ಅವರೊಂದಿಗೆ ಬಿಜೆಪಿ ಸೇರ್ಪಡೆಯಾಗಲು ಅರ್ಚನಾ ಯೋಜಿಸಿದ್ದರಾದರೂ, ತಮ್ಮ ಪುತ್ರಿಯ ವಿವಾಹ ಕಾರ್ಯಕ್ರಮವಿದ್ದುದರಿಂದ ತಮ್ಮ ಯೋಜನೆಯನ್ನು ಮುಂದೂಡಿದ್ದರು.
2004ರಿಂದ 2008ರವರೆಗೆ ಯುಪಿಎ ಸರಕಾರದಲ್ಲಿ ಶಿವರಾಜ್ ಪಾಟೀಲ್ ಕೇಂದ್ರ ಗೃಹ ಸಚಿವರಾಗಿದ್ದರು.