ಮುಂಜಾಗ್ರತಾ ವಶಕ್ಕೆ ಪ್ರಾಧಿಕಾರಗಳು ಪ್ರತ್ಯೇಕ ಆಧಾರಗಳನ್ನು ತಿಳಿಸಬೇಕು: ಸುಪ್ರೀಂ ಕೋರ್ಟ್

ಹೊಸದಿಲ್ಲಿ: ಮುಂಜಾಗ್ರತಾ ವಶ ಆದೇಶಗಳು ವಶಕ್ಕೆ ಪಡೆಯುವ ಪ್ರಾಧಿಕಾರಗಳ ಸ್ವತಂತ್ರ ವಿವೇಚನಾಧಿಕಾರವನ್ನು ಪ್ರತಿಫಲಿಸಬೇಕೇ ಹೊರತು, ತಮ್ಮ ಎದುರು ಮಂಡಿಸಲಾದ ವಿಷಯಗಳ ಕಾಟಾಚಾರದ ಉಲ್ಲೇಖಗಳಾಗಬಾರದು ಎಂದು ಇತ್ತೀಚೆಗೆ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
“ಪ್ರಸ್ತಾವನೆಗಳು ಹಾಗೂ ಅದಕ್ಕೆ ಪೂರಕವಾದ ದಾಖಲೆಗಳು ಸಮಾಧಾನಕರವಾಗಿವೆ” ಎಂಬ ಹೇಳಿಕೆಯೊಂದೇ ಮುಂಜಾಗ್ರತಾ ವಶ ಆದೇಶಗಳಿಗೆ ಸಾಕಾಗುವುದಿಲ್ಲ ಹಾಗೂ ಅವು ಸಾಂವಿಧಾನಿಕ ಮತ್ತು ಶಾಸನಾತ್ಮಕ ಅಗತ್ಯತೆಗಳನ್ನು ಪೂರೈಸುವುದಿಲ್ಲ” ಎಂದು ನ್ಯಾ. ಸಂಜಯ್ ಕುಮಾರ್ ಹಾಗೂ ನ್ಯಾ. ಆಗಸ್ಟಿನ್ ಜಾರ್ಜ್ ಮಾಸಿಹ್ ಅವನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ನಾಗಾಲ್ಯಾಂಡ್ ನ ಗೃಹ ಇಲಾಖೆಯ ವಿಶೇಷ ಕಾರ್ಯದರ್ಶಿಗಳು ತಮ್ಮ ವಿರುದ್ಧ ಹೊರಡಿಸಿದ್ದ ಮುಂಜಾಗ್ರತಾ ವಶ ಆದೇಶಗಳನ್ನು ಪ್ರಶ್ನಿಸಿ ಇಬ್ಬರು ಮೇಲ್ಮನವಿದಾರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಅವರ ವಿರುದ್ಧ ಜಾರಿಗೊಳಿಸಲಾಗಿದ್ದ ಮುಂಜಾಗ್ರತಾ ಆದೇಶಗಳನ್ನು ರದ್ದುಗೊಳಿಸಿತು. ವಶಕ್ಕೆ ಪಡೆಯುವ ಪ್ರಾಧಿಕಾರಗಳು ಅರ್ಜಿದಾರರನ್ನು ವಶಕ್ಕೆ ಪಡೆಯಲು ಯಾವುದೇ ಸ್ವತಂತ್ರ ಆಧಾರಗಳನ್ನು ಒದಗಿಸಿಲ್ಲ ಹಾಗೂ ಕೇವಲ ಪೊಲೀಸರು ಮಂಡಿಸಿರುವ ಪ್ರಸ್ತಾವನೆಯನ್ನು ಆಧರಿಸಿ ವಶಕ್ಕೆ ಪಡೆದಿವೆ. ಈ ಧೋರಣೆ ಕಾನೂನಾತ್ಮಕವಾಗಿ ಸಮರ್ಥನೀಯವಲ್ಲ ಎಂಬ ಸಂಗತಿಯನ್ನು ನ್ಯಾಯಾಲಯ ಪರಿಗಣನೆಗೆ ತೆಗೆದುಕೊಂಡಿತು.
ಮಾದಕ ದ್ರವ್ಯಗಳು ಹಾಗೂ ಸಮ್ಮೋಹನ ವಸ್ತುಗಳ ಅಕ್ರಮ ಸಾಗಾಟ ನಿಷೇಧ ಕಾಯ್ದೆ, 1988ರ ಅಡಿ ಹೊರಡಿಸಲಾಗಿದ್ದ ಮುಂಜಾಗ್ರತಾ ವಶದ ಆದೇಶಗಳು ಸೂಕ್ತ ಕಾರಣಗಳ ಆಧಾರವನ್ನು ಹೊಂದಿಲ್ಲ ಹಾಗೂ ಅವುಗಳನ್ನು ಯಾಂತ್ರಿಕವಾಗಿ ಹೊರಡಿಸಲಾಗಿದೆ ಎಂದು ಆರೋಪಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯನ್ನು ಆಧರಿಸಿ ಈ ತೀರ್ಪು ನೀಡಲಾಗಿದೆ.