ಮುಸ್ಲಿಮರು ಮೀಸಲಾತಿಯ ಲಾಭ ಪಡೆಯಬಾರದೆ?: ಲಾಲೂ ಯಾದವ್ ಪ್ರಶ್ನೆ

Update: 2024-05-07 09:01 GMT

ಲಾಲೂ ಯಾದವ್ | PC : PTI 

ಪಾಟ್ನಾ: ಮುಸ್ಲಿಮರಿಗೆ ಮೀಸಲಾತಿ ಲಾಭವನ್ನು ವಿಸ್ತರಿಸುವುದರ ಪರವಾಗಿ ನಾನಿದ್ದೇನೆ ಎಂದು ಮಂಗಳವಾರ ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದರು.

ಸಂವಿಧಾನವನ್ನು ರದ್ದುಪಡಿಸುವ ಮೂಲಕ ಮೀಸಲಾತಿಯನ್ನು ಕಿತ್ತುಕೊಳ್ಳುವುದು ಕೇಂದ್ರದಲ್ಲಿನ ಆಡಳಿತಾರೂಢ ಬಿಜೆಪಿ ಸರಕಾರದ ಉದ್ದೇಶವಾಗಿದೆ ಎಂದು ಅವರು ಆರೋಪಿಸಿದರು.

ವಿಧಾನ ಪರಿಷತ್ ಆವರಣದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಲಾಲೂ ಪ್ರಸಾದ್ ಯಾದವ್, "ಸಂವಿಧಾನದಲ್ಲಿ ಒದಗಿಸಲಾಗಿರುವ ಮೀಸಲಾತಿಯ ವಿರುದ್ಧ ಬಿಜೆಪಿ ಇದೆ. ಹೀಗಾಗಿ ಅದು ಎರಡನ್ನೂ ಕಿತ್ತುಕೊಳ್ಳಲು ಬಯಸುತ್ತಿದೆ" ಎಂದು ದೂರಿದರು.

ಅಧಿಕಾರಕ್ಕೆ ಬಂದರೆ ಕಾಂಗ್ರೆಸ್, ಆರ್‌ಜೆಡಿ ಮತ್ತು ಮಿತ್ರಪಕ್ಷಗಳು ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾಗಿರುವ ಮೀಸಲಾತಿಯನ್ನು ಕಸಿದುಕೊಂಡು, ಅದನ್ನು ಮುಸ್ಲಿಮರಿಗೆ ಹಂಚುತ್ತವೆ ಎಂಬ ಬಿಜೆಪಿಯ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, "ಮುಸ್ಲಿಮರು ಮೀಸಲಾತಿಯ ಲಾಭವನ್ನು ಪಡೆಯಬಾರದೆ?" ಎಂದು ಪ್ರಶ್ನಿಸಿದರು.

ಬಿಜೆಪಿಯು ಚುನಾವಣಾ ಸಮಾವೇಶಗಳಲ್ಲಿ ಬೆದರಿಕೆ ಹುಟ್ಟಿಸುವ ಹಾಗೂ ಜಂಗಲ್ ರಾಜ್ ಪುಕಾರನ್ನು ಹಬ್ಬಿಸುವ ಕೆಲಸದಲ್ಲಿ ನಿರತವಾಗಿದೆ ಎಂದೂ ಅವರು ಆರೋಪಿಸಿದರು.

"ಈ ಬಾರಿ ನಾನೂರರಾಚೆ" ಎಂಬ ಪ್ರಧಾನಿ ನರೇಂದ್ರ ಮೋದಿಯ ಘೋಷಣೆಯನ್ನು ವ್ಯಂಗ್ಯವಾಡಿದ ಲಾಲೂ ಪ್ರಸಾದ್ ಯಾದವ್, "ಅವರೇ ಸ್ವತಃ ಆಚೆ ಹೋಗಲಿದ್ದಾರೆ" ಎಂದು ಲೇವಡಿ ಮಾಡಿದರು. ಇದೇ ಸಂದರ್ಭದಲ್ಲಿ ಚುನಾವಣಾ ಫಲಿತಾಂಶವು ನಮ್ಮ ಪರವಾಗಿರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News