ಮತಾಂತರ ಆರೋಪದಲ್ಲಿ ಬಂಧಿತರಾಗಿರುವ ಇಸ್ಲಾಮಿಕ್ ವಿದ್ವಾಂಸರ ನಿರ್ದಿಷ್ಟ ಪಾತ್ರವನ್ನು ತೋರಿಸಿ: ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ
ಹೊಸದಿಲ್ಲಿ: ಕಾನೂನು ಬಾಹಿರ ಮತಾಂತರದ ಆರೋಪದಲ್ಲಿ ಬಂಧಿತರಾಗಿರುವ ಇಸ್ಲಾಮಿಕ್ ವಿದ್ವಾಂಸ ಕಲೀಮ್ ಸಿದ್ದಿಕಿ ಅವರ ನಿರ್ದಿಷ್ಟ ಪಾತ್ರದ ಕುರಿತು ಸಾಕ್ಷ್ಯ ಒದಗಿಸಿ ಎಂದು ಮಂಗಳವಾರ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚಿಸಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಪಶ್ಚಿಮ ಉತ್ತರ ಪ್ರದೇಶದ ಗಣ್ಯ ಇಸ್ಲಾಮಿಕ್ ವಿದ್ವಾಂಸರ ಪೈಕಿ ಒಬ್ಬರಾದ ಸಿದ್ದಿಕಿ ಅವರನ್ನು ರಾಜ್ಯ ಉಗ್ರ ನಿಗ್ರಹ ದಳವು ಸೆಪ್ಟೆಂಬರ್, 2021ರಲ್ಲಿ ಬಂಧಿಸಿತ್ತು.
ಸಿದ್ದಿಕಿ ಅವರು ಭಾರತದ ಬೃಹತ್ ಧಾರ್ಮಿಕ ಮತಾಂತರದ ಗುಂಪನ್ನು ನಡೆಸುತ್ತಿದ್ದಾರೆ ಎಂದು ರಾಜ್ಯ ಉಗ್ರ ನಿಗ್ರಹ ದಳವು ಆರೋಪಿಸಿತ್ತು. ಕೋಮು ಸೌಹಾರ್ದ ಕಾರ್ಯಕ್ರಮಗಳ ಹೆಸರಲ್ಲಿ ಸಿದ್ದಿಕಿ ಅವರ ಜಾಮಿಯಾ ಇಮಾಮ್ ವಲಿಯುಲ್ಲಾ ಟ್ರಸ್ಟ್ ಕಾನೂನು ಬಾಹಿರ ಧಾರ್ಮಿಕ ಮತಾಂತರವನ್ನು ನಡೆಸುತ್ತಿದೆ ಎಂದು ಅದು ಆರೋಪಿಸಿತ್ತು.
ಕಳೆದ ಎಪ್ರಿಲ್ ತಿಂಗಳಲ್ಲಿ ಸಿದ್ದಿಕಿ ಅವರಿಗೆ ಅಲಹಾಬಾದ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. ಈ ಆದೇಶವನ್ನು ಉತ್ತರ ಪ್ರದೇಶ ಪೊಲೀಸರು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು.
ಮಂಗಳವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಗರಿಮಾ ಪ್ರಶಾದ್, ಸಿದ್ದಿಕಿ ಅವರ ಸಹ ಆರೋಪಗಳಿಗೆ ಜಾಮೀನು ಮಂಜೂರು ಮಾಡಿರುವ ಏಕೈಕ ಕಾರಣಕ್ಕೆ ಸಿದ್ದಿಕಿ ಅವರಿಗೂ ಈ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ ಎಂದು ವಾದಿಸಿದರು ಎಂದು Live Law ವರದಿ ಮಾಡಿದೆ.
“ಈ ವಿಚಾರದಲ್ಲಿ ಬೇರೇನನ್ನೂ ಪರಿಗಣಿಸಲಾಗಿಲ್ಲ. ಆದರೆ, ಈ ಪ್ರಕರಣದಲ್ಲಿ ಸಿದ್ದಿಕಿ ಮುಖ್ಯ ಆರೋಪಿ ಹಾಗೂ ಪ್ರಮುಖ ಪಿತೂರಿಗಾರರಾಗಿದ್ದಾರೆ” ಎಂದು ಪ್ರಶಾದ್ ವಾದಿಸಿದರು.
ಅದಕ್ಕೆ ಪ್ರತಿಯಾಗಿ ಸಿದ್ದಿಕಿ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ತಮ್ಮ ಕಕ್ಷಿದಾರರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಮಾಡಿರುವ ಆರೋಪಗಳನ್ನು ಪ್ರಶ್ನಿಸಿದರು.
“ಅವರು ಅಪರಾಧ ದಂಡ ಸಂಹಿತೆಯ ಸೆಕ್ಷನ್ 161ರ ಅಡಿ ಆರೋಪಿಯ ಹೇಳಿಕೆಯನ್ನು ನ್ಯಾಯಾಲಯದೆದುರು ಮಂಡಿಸುತ್ತಿದ್ದಾರೆ (ತನಿಖಾಧಿಕಾರಿಯ ಮುಂದೆ ನೀಡಲಾಗುವ ಮೌಖಿಕ ಹೇಳಿಕೆಗಳ ಕುರಿತು ಈ ಸೆಕ್ಷನ್ ವ್ಯವಹರಿಸುತ್ತದೆ) ಹಾಗೂ ನ್ಯಾಯಾಲಯವು ಆ ಹೇಳಿಕೆಯ ಮೇಲೆ ಭರವಸೆ ಇಡಬೇಕು ಎಂದು ಬಯಸುತ್ತಿದ್ದಾರೆ. ಇದು ನಿಜಕ್ಕೂ ನಂಬಲಸಾಧ್ಯ” ಎಂದು ವಾದಿಸಿದರು.
ಆಗ, ಪ್ರಕರಣದಲ್ಲಿ ಸಿದ್ದಿಕಿ ಅವರ ಪಾತ್ರದ ಕುರಿತ ವಿವರಗಳು ಹಾಗೂ ಅಲಹಾಬಾದ್ ಹೈಕೋರ್ಟ್ ಮುಂದೆ ಮಂಡಿಸಲಾಗಿದ್ದ ವಿಚಾರಗಳನ್ನು ನ್ಯಾಯಾಲಯಕ್ಕೆ ಒದಗಿಸಿ ಎಂದು ಉತ್ತರ ಪ್ರದೇಶ ಸರ್ಕಾರಕ್ಕೆ ನ್ಯಾಯಪೀಠವು ಸೂಚಿಸಿತು.
ಸೆಪ್ಟೆಂಬರ್ 5ರಂದು ಪ್ರಕರಣದ ಮುಂದಿನ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸಲಿದೆ.