ಸಿಕ್ಕಿಂ ಪ್ರವಾಹ: ಸುರಂಗದಲ್ಲಿ ಸಿಲುಕಿಕೊಂಡವರ ರಕ್ಷಣೆಗೆ ಕಾರ್ಯಾಚರಣೆ

Update: 2023-10-06 01:47 GMT

Photo: PTI 

ಗುವಾಹತಿ: ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ (ಎನ್ಡಿಆರ್ಎಫ್)ಯ 60 ಮಂದಿ ಯೋಧರು ಶುಕ್ರವಾರ ಮುಂಜಾನೆ ಉತ್ತರ ಸಿಕ್ಕಿಂನ ಚುಂಗ್ಥಾಂಗ್ಗೆ ಪ್ರಯಾಣ ಬೆಳೆಸಿದ್ದು, 48 ಗಂಟೆ ಕಾಲ ಅನ್ನ ನೀರು ಇಲ್ಲದೇ ಸುರಂಗದಲ್ಲಿ ಸಿಲುಕಿಕೊಂಡಿರುವ 14 ಮಂದಿಯ ರಕ್ಷಣೆಯ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಇವರು ಸುರಂಗದಿಂದ ಹೊರಬಂದ ಸಾಧ್ಯತೆ ಇಲ್ಲ. ಈ ಸುರಂಗ ಮುಳುಗಡೆಯಾಗಿದೆಯೇ ಎಂಬ ಬಗ್ಗೆಯೂ ಖಚಿತ ಮಾಹಿತಿ ಇಲ್ಲ. ಪ್ರವಾಹಕ್ಕೆ ಮುನ್ನ ಇಲ್ಲಿ ಕೆಲಸಕ್ಕೆ ತೆರಳಿದ್ದ 12-14 ಮಂದಿ ಜೀವಂತವಾಗಿ ಉಳಿದಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ಮಾಹಿತಿಯೂ ಇಲ್ಲದೇ ಈ ಸವಾಲುದಾಯಕ ಕಾರ್ಯಾಚರಣೆ ಆರಂಭಿಸಿದ್ದಾರೆ.

ಈ ರಕ್ಷಣಾ ತಂಡದಲ್ಲಿ ಭೂಮಿಯಲ್ಲಿ ಸಿಕ್ಕಿಹಾಕಿಕೊಂಡಿರುವವರನ್ನು ರಕ್ಷಿಸುವ ತಜ್ಞರು ಮತ್ತು ಸ್ಕೂಬಾ ಡ್ರೈವರ್ಗಳು ಸೇರಿದ್ದಾರೆ. ಹ್ಯಾಮರ್, ವಾಟರ್ ಗನ್, ಕಲ್ಲು ಕತ್ತರಿಸುವ ತಂತ್ರ, ಉಪಗ್ರಹ ಫೋನ್, ಜನರೇಟರ್ ಸೆಟ್ ಮತ್ತು ಜೀವರಕ್ಷಕ ವೈದ್ಯಕೀಯ ಸಾಧನಗಳ ಜತೆಗೆ ಕಾರ್ಯಾಚರಣೆ ತಂಡ ಸ್ಥಳಕ್ಕೆ ಧಾವಿಸಿದೆ.

ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಮೊಬೈಲ್ ಟವರ್ಗಳು ಧರಾಶಾಹಿಯಾಗಿವೆ. ಸೇತುವೆಗಳು ನಾಶವಾಗಿದ್ದು, ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಬುಧವಾರದ ದಿಢೀರ್ ಪ್ರವಾಹ ಚುಂಗ್ಥಾಂಗ್ ಪಟ್ಟಣವನ್ನು ಸಿಕ್ಕಿಂನ ಇತರ ಭಾಗದ ಜತೆಗಿನ ಸಂಪರ್ಕದಿಂದ ಕಡಿತಗೊಳಿಸಿದೆ. ಯಾವುದೇ ಸಂಪರ್ಕ ಸಾಧನಗಳು ಇಲ್ಲದ ಹಿನ್ನೆಲೆಯಲ್ಲಿ ಸಿಲುಕಿಹಾಕಿಕೊಂಡಿರುವವರು ಜೀವಂತವಿದ್ದಾರೆಯೇ ಎಂಬ ಮಾಹಿತಿ ಕೂಡಾ ಲಭ್ಯವಾಗಿಲ್ಲ. ರಾಜ್ಯ ಸರ್ಕಾರ ಹಾಗೂ ತೀಸ್ತಾ-3 ಅಣೆಕಟ್ಟು ನಿರ್ವಹಿಸುವ ಸಂಸ್ಥೆಯ ಜತೆ ರಕ್ಷಣಾ ತಂಡ ಕಾರ್ಯಾಚರಣೆ ಕೈಗೊಂಡಿದೆ. ಈ ಸುರಂಗಗಳು ತೀಸ್ತಾ-3 ಅಣೆಕಟ್ಟಿನ ಆವರಣದಲ್ಲಿದ್ದು, ಗುರುವಾರದ ಮಿಂಚಿನ ಪ್ರವಾಹದಿಂದ ಇದಕ್ಕೆ ಹಾನಿಯಾಗಿದೆ.

"ಅವರು ಜೀವಂತ ಇದ್ದಾರೆ ಎಂಬ ನಿರೀಕ್ಷೆ ನಮ್ಮದು. ನಾವು ಅಲ್ಲಿಗೆ ತಲುಪಿದಾಗ ಘಟನೆ ನಡೆದು 48 ಗಂಟೆ ಕಳೆಯುತ್ತಿದೆ. ಆದಾಗ್ಯೂ ಅವರು ಜೀವಂತ ಇದ್ದಾರೆ ಎಂಬ ಆಶಾಭಾವನೆ ಹೊಂದಿದ್ದೇವೆ" ಎಂದು ಕಾರ್ಯಾಚರಣೆ ತಂಡದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಜಲಾಶಯವನ್ನು ದಾಟಲು 200 ಮೀಟರ್ ಉದ್ದದ ಈ ಸುರಂಗಗಳನ್ನು ಕಾರ್ಮಿಕರು ಬಳಸುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News