ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ; ಪ್ರಧಾನಿ ಮೋದಿಯನ್ನು ಹೊಗಳಿದ ನಿತೀಶ್
ಪಾಟ್ನಾ: ಬಂಗಾಳದಲ್ಲಿ ಏಕಾಂಗಿಯಾಗಿ ಲೋಕಸಭಾ ಚುನಾವಣೆ ಎದುರಿಸುವುದಾಗಿ ಮಮತಾ ಬ್ಯಾನರ್ಜಿ ಘೋಷಿಸಿದ ಬೆನ್ನಲ್ಲೇ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡಾ ಹಿಂದಿನ ಯುಪಿಎ ಸರ್ಕಾರದ ಹಾಗೂ ಕುಟುಂಬ ರಾಜಕಾರಣದ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಇಂಡಿಯಾ ಮೈತ್ರಿಕೂಟಕ್ಕೆ ಆಘಾತ ನೀಡಿದ್ದಾರೆ.
ಸಮಾಜವಾದಿ ನಾಯಕ ಕರ್ಪೂರಿ ಠಾಕೂರ್ ಅವರಿಗೆ ಭಾರತ ರತ್ನ ನೀಡುವಂತೆ ಪದೇ ಪದೇ ಮನವಿ ಮಾಡಿಕೊಂಡಾಗಲೂ ಕೂಡಾ ಅಂದಿನ ಕೇಂದ್ರ ಸರ್ಕಾರ ಸ್ಪಂದಿಸಿರಲಿಲ್ಲ ಎಂದು ಟೀಕಿಸಿದ್ದಾರೆ.
ಕೋಟಾ ರಾಜಕೀಯದ ಪಿತಾಮಹ ಎನಿಸಿದ ಠಾಕೂರ್ ಅವರಿಗೆ ದೇಶದ ಅತ್ಯುನ್ನತ ಗೌರವವನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ ನಿತೀಶ್, ವಂಶ ರಾಜಕಾರಣವನ್ನು ಕಟುವಾಗಿ ವಿರೋಧಿಸಿದ್ದಾರೆ.
ಕರ್ಪೂರಿಯವರ ಶತಮಾನೋತ್ಸವ ಸಮಾರಂಭದ ಸಂಬಂಧ ಜೆಡಿಯು ಆಯೋಜಿಸಿದ್ದ ರ್ಯಾಲಿಯಲ್ಲಿ ಮಾತನಾಡಿದ ಅವರು, "ಬಿಹಾರದಲ್ಲಿ 2005ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಕೇಂದ್ರದಲ್ಲಿದ್ದ ಸರ್ಕಾರಗಳಿಗೆ 2023ರವರೆಗೂ ಮನವಿ ಮಾಡುತ್ತಾ ಬಂದಿದ್ದೆ. ಅಂತಿಮವಾಗಿ ಮೋದಿ ಸರ್ಕಾರ ನನ್ನ ಬೇಡಿಕೆ ಈಡೇರಿಸಿದೆ. ನಾನು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ" ಎಂದು ಹೇಳಿದರು.
ಕರ್ಪೂರಿ ಠಾಕೂರ್ ಅವರ ಮಗ ಮತ್ತು ಸಂಸದ ರಾಮನಾಥ್ ಠಾಕೂರ್ ಅವರು ಪ್ರಧಾನಿ ತಮಗೆ ಕರೆ ಮಾಡಿದ್ದನ್ನು ತಿಳಿಸಿದರು. ಆದರೆ ಮೋದಿ ನನಗೆ ಕರೆ ಮಾಡಿಲ್ಲ. ಆದರೂ ನಾನು ಮಾಧ್ಯಮದವರ ಮೂಲಕ ಮೋದಿಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ" ಎಂದರು.