ಅಮೇಥಿ, ರಾಯ್ ಬರೇಲಿ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಹೊಣೆ ಖರ್ಗೆ, ಸೋನಿಯಾ ಗಾಂಧಿ ಹೆಗಲಿಗೆ
ಹೊಸದಿಲ್ಲಿ: ಕಾಂಗ್ರೆಸ್ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಸಭೆ ಶನಿವಾರ ನಡೆದಿದ್ದು, ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾದ ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ಯಾರನ್ನು ಕಣಕ್ಕೆ ಇಳಿಸಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಹೊಣೆಯನ್ನು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸೋನಿಯಾ ಗಾಂಧಿ ಅವರಿಗೆ ನೀಡಿದೆ.
ರಾಹುಲ್ ಗಾಂಧಿಯವರು ಅಮೇಥಿಯಿಂದ ಹಾಗೂ ಪ್ರಿಯಾಂಕಾಗಾಂಧಿ ವಾದ್ರಾ ರಾಯ್ ಬರೇಲಿಯಿಂದ ಸ್ಪಧಿಸಬೇಕು ಎಂಬ ವಿಚಾರದಲ್ಲಿ ಪಕ್ಷದ ವರಿಷ್ಠರು ನಿರ್ಧಾರ ಕೈಗೊಳ್ಳುವಂತೆ ಸಭೆ ಕೋರಿದೆ. ಈ ಬಗ್ಗೆ ಅಂತಿಮ ನಿರ್ಧಾರವನ್ನು ಪಕ್ಷಾಧ್ಯಕ್ಷರು ಕೈಗೊಳ್ಳುವ ಸಾಧ್ಯತೆ ಇದೆ.
2019ರ ವರೆಗೂ ಕಾಂಗ್ರೆಸ್ ನ ಭದ್ರಕೋಟೆಯಾಗಿದ್ದ ಅಮೇಥಿಯಲ್ಲಿ ಬಿಜೆಪಿಯ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ವಿರುದ್ಧ ಗೆಲುವು ಸಾಧಿಸಿ ಕಾಂಗ್ರೆಸ್ ಕೋಟೆ ವಶಪಡಿಸಿಕೊಂಡಿದ್ದರು. ರಾಯ್ ಬರೇಲಿಯನ್ನು ಪ್ರತಿನಿಧಿಸುತ್ತಿದ್ದ ಸೋನಿಯಾಗಾಂಧಿ ರಾಜ್ಯಸಭೆಗೆ ಆಯ್ಕೆಯಾಗಿದ್ದು, ಈ ಕ್ಷೇತ್ರದಿಂದ ಗಾಂಧಿ ಕುಟಂಬಕ್ಕೆ ಸೇರಿದ ಪ್ರಿಯಾಂಕಾ ಸ್ಪರ್ಧಿಸುತ್ತಾರೆ ಎಂಬ ವದಂತಿ ದಟ್ಟವಾಗಿದೆ. ಆದರೆ ಈ ಎರಡು ಪ್ರಮುಖ ಕ್ಷೇತ್ರಗಳ ಅಭ್ಯರ್ಥಿಯನ್ನು ಪಕ್ಷ ಇನ್ನೂ ಘೋಷಿಸಿಲ್ಲ.
ಪಕ್ಷ ಬಯಸಿದರೆ ಅಮೇಥಿಯಿಂದ ಸ್ಪರ್ಧಿಸುವುದಾಗಿ ರಾಹುಲ್ ಈ ಹಿಂದೆ ಹೇಳಿದ್ದರು. ಏಪ್ರಿಲ್ 26ರಂದು ನಡೆದ ಎರಡನೇ ಹಂತದ ಚುನಾವಣೆಯಲ್ಲಿ ವಯನಾಡ್ ಕ್ಷೇತ್ರದ ಮತದಾನ ಮುಗಿದಿದ್ದು, ಇದೀಗ ಎರಡನೇ ಕ್ಷೇತ್ರದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಸಿಇಸಿ ಸಭೆಗೆ ಮುನ್ನ ಅಸ್ಸಾಂನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಗ್ಗೆ ಪ್ರಸ್ತಾಪಿಸಿ, "ಈ ಸಸ್ಪೆನ್ಸ್ ಇನ್ನೂ ಕೆಲ ದಿನಗಳ ಕಾಲ ಉಳಿಯಲಿದೆ. ಜನರಿಂದ ಅಭ್ಯರ್ಥಿಗಳ ಹೆಸರು ಬಂದಾಗ ನಾನು ಅಧಿಸೂಚನೆಗೆ ಸಹಿ ಮಾಡಿ ಘೋಷಿಸುತ್ತೇನೆ" ಎಂದು ಖರ್ಗೆ ಸ್ಪಷ್ಟಪಡಿಸಿದ್ದರು.