ಆರೋಗ್ಯ ಮೂಲಸೌಕರ್ಯಗಳ ಮೇಲೆ ಹೆಚ್ಚು ವೆಚ್ಚ ಮಾಡಿ : ರಾಜ್ಯಗಳಿಗೆ ಕೆಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಕರೆ

Update: 2024-08-05 14:54 GMT

ಜೆ.ಪಿ.ನಡ್ಡಾ | PC : PTI  

ಹೊಸದಿಲ್ಲಿ: ಆರೋಗ್ಯ ಸೇವೆ ಮೂಲಸೌಕರ್ಯಗಳನ್ನು ಸುಧಾರಿಸಲು ಹೆಚ್ಚು ವೆಚ್ಚ ಮಾಡಬೇಕು ಎಂದು ರಾಜ್ಯ ಸರಕಾರಗಳಿಗೆ ಸೋಮವಾರ ಕರೆ ನೀಡಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ, ಪಿಎಂ-ಆಯುಷ್ಮಾನ್ ಭಾರತ್ ಹೆಲ್ತ್ ಕೇರ್ ಇನ್ಫ್ರಾಸ್ಟ್ರಕ್ಚರ್ ಮಿಷನ್ (PM-ABHIM) ಅಡಿಯಲ್ಲಿನ ಮಂಜೂರಾತಿಗಳನ್ನು ಕಡಿತಗೊಳಿಸಲಾಗಿದೆ ಎಂಬ ವಿಪಕ್ಷಗಳ ಆರೋಪಗಳನ್ನು ತಳ್ಳಿ ಹಾಕಿದರು.

ಲೋಕಸಭೆಯಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅನುದಾನಗಳ ಬೇಡಿಕೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವೈದ್ಯಕೀಯ ಕಾಲೇಜುಗಳ ಸಂಖ್ಯೆಯಲ್ಲಿನ ಏರಿಕೆ, ಆರೋಗ್ಯ ಸೇವೆಯ ಮೇಲಿನ ವೆಚ್ಚವನ್ನು ಕಡಿಗೊಳಿಸಲು ತೆಗೆದುಕೊಂಡಿರುವ ಕ್ರಮಗಳು ಹಾಗೂ ಕ್ಯಾನ್ಸರ್ ಹಾಗೂ ಸಿಕಲ್ ಸೆಲ್ ರಕ್ತಹೀನತೆಯಂತಹ ರೋಗಗಳನ್ನು ಮುಂಚಿತವಾಗಿಯೇ ಪರೀಕ್ಷಿಸುವ ಉಪಕ್ರಮಗಳನ್ನು ತಮ್ಮ ಸರಕಾರದ ಸಾಧನೆಗಳು ಎಂದು ಪ್ರತಿಪಾದಿಸಿದರು.

“ನಾವು ಕೇವಲ ಪ್ರಕಟಣೆಯಲ್ಲಿ ನಂಬಿಕೆಯಿರಿಸಿಲ್ಲ. ನಾವು ಪರಿಣಾಮಕಾರಿ ಯೋಜನೆ, ಕೊನೆ ಹಂತದವರೆಗಿನ ತಲುಪುವಿಕೆ, ಕೊನೆಯ ಹಂತದ ತಲುಪುವಿಕೆಯಲ್ಲಿನ ತೊಂದರೆಗಳನ್ನು ನಿವಾರಿಸುವುದರಲ್ಲಿ ನಂಬಿಕೆ ಇರಿಸಿದ್ದೇವೆ” ಎಂದು ನಡ್ಡಾ ಹೇಳಿದರು.

ಸದನದಲ್ಲಿ ಪ್ರತಿಭಟಿಸುತ್ತಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರಿಗೆ, ಪಶ್ಚಿಮ ಬಂಗಾಳ ಸರಕಾರವೇಕೆ ಡೆಂಗ್ಯೂ ದಾಖಲೆಗಳನ್ನು ಕೇಂದ್ರ ಸರಕಾರದೊಂದಿಗೆ ಹಂಚಿಕೊಂಡಿಲ್ಲ ಎಂದು ಪ್ರಶ್ನಿಸಿದರು.

ಆರೋಗ್ಯ ಮೂಲಸೌಕರ್ಯ ಕಾರ್ಯಯೋಜನೆಯ ನಿಧಿಯನ್ನು ಕಡಿತಗೊಳಿಸಲಾಗಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ನಡ್ಡಾ, ಕಳೆದ ವರ್ಷದ ಬಜೆಟ್ ನಲ್ಲಿ ಮೀಸಲಿರಿಸಲಾಗಿದ್ದ 4,200 ಕೋಟಿ ರೂ. ಪೈಕಿ ರಾಜ್ಯ ಸರಕಾರಗಳು ಕೇವಲ 1,806 ಕೋಟಿ ರೂ. ವನ್ನಷ್ಟೆ ವೆಚ್ಚ ಮಾಡಿವೆ ಎಂಬುದರತ್ತ ಗಮನ ಸೆಳೆದರು.

ಮೋದಿ ಸರಕಾರವು ಕೇಂದ್ರ ಬಜೆಟ್ ಮಂಜೂರಾತಿಯಲ್ಲಿ ಆರೋಗ್ಯ ಸೇವೆಯನ್ನು ಆದ್ಯತಾ ವಲಯವನ್ನಾಗಿಸಿದೆ ಎಂದೂ ಅವರು ಸಮರ್ಥಿಸಿಕೊಂಡರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News