ಬಿಕಿನಿ ಫೋಟೋ ಪೋಸ್ಟ್ ಮಾಡಿದ ವಿದ್ಯಾರ್ಥಿನಿಗೆ ಶಾಲೆಯಲ್ಲಿ ಕಿರುಕುಳ: ಆರೋಪ

Update: 2024-07-01 03:01 GMT

PC: x.com/GlobeEyeNews

ಗುವಾಹತಿ: ಈಜುಕೊಳದಲ್ಲಿ ಬಿಕಿನಿ ಧರಿಸಿರುವ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಕಾರಣಕ್ಕೆ 17 ವರ್ಷದ ಲಿಂಗ ಪರಿವರ್ತಿತ ವಿದ್ಯಾರ್ಥಿನಿಯನ್ನು ಶಾಲೆಯಿಂದ ಬಲವಂತವಾಗಿ ಹೊರ ಹೋಗುವಂಥ ವಾತಾವರಣ ಸೃಷ್ಟಿಸಿದ ಘಟನೆ ಬೆಳಕಿಗೆ ಬಂದಿದೆ.

ಗಂಡುಮಗುವಾಗಿ ಹುಟ್ಟಿ ಲಿಂಗ ಪರಿವರ್ತನೆ ಮಾಡಿಸಿಕೊಂಡ ಮಗಳಿಗೆ ನ್ಯಾಯ ಒದಗಿಸುವಂತೆ ವಿದ್ಯಾರ್ಥಿನಿಯ ತಂದೆ, ಸಿಎಂ ಹಿಮಂತ ಬಿಸ್ವ ಶರ್ಮಾ ಅವರಿಗೆ ಪತ್ರ ಬರೆದಿದ್ದಾರೆ. "ಗಂಡುಮಗುವಾಗಿ ಹುಟ್ಟಿ ಈ ಆಯ್ಕೆ ಮಾಡಿಕೊಂಡ ಮಗುವನ್ನು ನಿರಂತರವಾಗಿ ದ್ವೇಷಿಸಲಾಗುತ್ತಿದೆ. ಅಸ್ಸಾಂ ಶಾಲೆಯ ಇತ್ತೀಚಿನ ಘಟನೆ ಯುವ ಮನಸ್ಸುಗಳನ್ನು ಪೋಷಿಸಬೇಕಾದ ಸಾಂಸ್ಥಿಕ ವ್ಯವಸ್ಥೆಯ ಮೇಲಿರುವ ನಮ್ಮ ನಂಬಿಕೆಯನ್ನೇ ಅಲುಗಾಡಿಸಿದೆ. ಕಲಿಕೆಯ ಧಾಮವಾಗಬೇಕಾದ ಶಾಲೆ, ತೀರ್ಪಿನ ವೇದಿಕೆಯಾಗಿದೆ. ಇದು ನನ್ನ ಮಗಳ ಸ್ಥಿತಿ ಮಾತ್ರವಲ್ಲ. ಇತರ ಹಲವರ ಸ್ಥಿತಿಯೂ ಇದೇ ಆಗಿದೆ. ನಿರ್ಲಕ್ಷ್ಯದ ಕರಿ ನೆರಳಿನಿಂದ ಧ್ವನಿ ಅಡಗಿದೆ" ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

ಸಹ ಶಿಕ್ಷಣ ವ್ಯವಸ್ಥೆ ಇರುವ ಪ್ರಖ್ಯಾತ ಶಾಲೆಯ ಪ್ರಿನ್ಸಿಪಾಲ್, ನಮ್ಮ ಮಗಳನ್ನು ದೂಷಿಸುತ್ತಿದ್ದು, ಅಲ್ಪವಾಗಿ ಪರಿಗಣಿಸಿ, ಅಣಕಿಸುತ್ತಿದ್ದಾರೆ. ಆಕೆಯ ಸತ್ಯ ಮತ್ತು ಅಸ್ತಿತ್ವವನ್ನೇ ಗುರಿ ಮಾಡಿದ್ದಾರೆ. ಆಕೆಯ ಚಿತ್ರಗಳು ಅಶ್ಲೀಲತೆಯ ಅಭಿವ್ಯಕ್ತಿ ಎಂದು ಶಾಲೆಯ ಅಧಿಕಾರಿಗಳು ಪರಿಗಣಿಸಿದ್ದು, ಪೋಸ್ಟ್ ಕಿತ್ತು ಹಾಕುವಂತೆ ಒತ್ತಾಯಪಡಿಸಿದ್ದಾರೆ ಎಂದು ತಾಯಿ ದೂರಿದ್ದಾರೆ.

ಎಲ್ಲರಿಗೂ ಸಮಾನ ಸಮವಸ್ತ್ರವನ್ನು ಶಾಲೆಯಲ್ಲಿ ಒದಗಿಸುವ ಮೂಲಕ ಇಂಥ ಕಿರುಕುಳ ಮತ್ತು ಅಣಕಿಸುವಿಕೆ ವಿರುದ್ಧ ರಕ್ಷಣೆ ಒದಗಿಸುವಂತೆ ಪೋಷಕರು ಸಿಎಂಗೆ ಬರೆದ ಪತ್ರದಲ್ಲಿ ಆಗ್ರಹಿಸಿದ್ದಾರೆ. ರಾಜ್ಯದ ಲಿಂಗ ಪರಿವರ್ತಿತ ವ್ಯಕ್ತಿಗಳ ಕಲ್ಯಾಣ ಮಂಡಳಿ ಕೂಡಾ ಈ ಸಂಬಂಧ ಅಸ್ಸಾಂ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News