ತಮಿಳುನಾಡು: ಶಾಲೆಯಲ್ಲಿ ಊಟ ಸೇವಿಸಿದ 60 ಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥ

Update: 2023-07-16 10:55 GMT

ಸಾಂದರ್ಭಿಕ ಚಿತ್ರ (PTI)

ತಿರುವಣ್ಣಾಮಲೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕಾಮರಾಜರ್ ಅವರ 120ನೇ ಜನ್ಮದಿನಾಚರಣೆಯ ಅಂಗವಾಗಿ ತಯಾರಿಸಲಾಗಿದ್ದ ಊಟವನ್ನು ಸೇವಿಸಿ ತಮಿಳುನಾಡಿನ ಪಂಚಾಯತಿ ಸಂಯುಕ್ತ ಪ್ರೌಢಶಾಲೆಯ 69 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ತಿರುವಣ್ಣಾಮಲೈನಲ್ಲಿರುವ ತಂದರೈ ಗ್ರಾಮದಲ್ಲಿ ನಡೆದಿದೆ. ಮಾಧ್ಯಮಗಳ ವರದಿ ಪ್ರಕಾರ, ವಿದ್ಯಾರ್ಥಿಗಳಿಗೆ ಬಡಿಸಲಾದ ಊಟದಲ್ಲಿ ಹಲ್ಲಿ ಬಿದ್ದಿರುವುದು ಕಂಡು ಬಂದಿದ್ದು, ಬಡಿಸಲಾದ ಊಟವು ವಿಷಪೂರಿತವಾಗಲು ಇದೇ ಕಾರಣವಿರಬಹುದು ಎಂದು ಶಂಕಿಸಲಾಗಿದೆ ಎಂದು thenewsminute.com ವರದಿ ಮಾಡಿದೆ.

ಎಲ್ಲ ವಿದ್ಯಾರ್ಥಿಗಳನ್ನು ತಿರುವಣ್ಣಾಮಲೈನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಿಗಾ ಘಟಕದಲ್ಲಿಡಲಾಗಿದೆ. ವೈದ್ಯರು 67 ವಿದ್ಯಾರ್ಥಿಗಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ. ಆದರೆ, ಉಳಿದಿಬ್ಬರು ವಿದ್ಯಾರ್ಥಿಗಳಲ್ಲಿ ತಲೆ ಸುತ್ತು ಹಾಗೂ ವಾಂತಿಯಂಥ ದೂರುಗಳಿರುವುದರಿಂದ ಅವರನ್ನು ಶನಿವಾರ ನಿಗಾ ಘಟಕದಲ್ಲಿಡಲಾಗಿದೆ ಎಂದು ಹೇಳಲಾಗಿದೆ.

The Hindu ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಶಾಲಾ ಆಡಳಿತ ಮಂಡಳಿ ಸದಸ್ಯರ ಪ್ರಕಾರ, ಆಹಾರವನ್ನು ಸೇವಿಸಿದ ವಿದ್ಯಾರ್ಥಿಗಳಲ್ಲಿ ತಲೆ ಸುತ್ತು ಹಾಗೂ ವಾಂತಿಯಂಥ ಲಕ್ಷಣಗಳು ಕಾಣಿಸಿಕೊಂಡಿದ್ದರಿಂದ ಅವರನ್ನು ಕೂಡಲೇ ಆಸ್ಪತ್ರೆಗೆ ರವಾನಿಸಲಾಯಿತು ಎಂದು ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯ ಜಿಲ್ಲಾ ಶಿಕ್ಷಣಾಧಿಕಾರಿಯು, ಶಾಲಾ ಆಡಳಿತ ಮಂಡಳಿಯು ಘಟನಾ ವರದಿಯನ್ನು ಸಲ್ಲಿಸಲಿದ್ದು, ಅದನ್ನು ಆಧರಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕಾಮರಾಜರ್ ಜನ್ಮದಿನಾಚರಣೆಯ ಪ್ರಯುಕ್ತ ಶಿಕ್ಷಣ ಅಭಿವೃದ್ಧಿ ದಿನವನ್ನು ಹಮ್ಮಿಕೊಳ್ಳಲು ಶನಿವಾರದಂದು ಪೂರ್ಣಾವಧಿ ಕೆಲಸ ನಿರ್ವಹಿಸಬೇಕು ಎಂದು ರಾಜ್ಯದ ಎಲ್ಲ ಶಾಲೆಗಳಿಗೂ ಜುಲೈ 11ರಂದು ತಮಿಳುನಾಡು ಶಾಲಾ ಶಿಕ್ಷಣ ಇಲಾಖೆಯು ಸೂಚನೆ ನೀಡಿತ್ತು. ಎಲ್ಲ ಶಾಲೆಗಳೂ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಬೇಕು ಹಾಗೂ ಸಾರ್ವಜನಿಕ ಭಾಷಣ, ಕಾವ್ಯ ರಚನೆ, ಚಿತ್ರಕಲೆ, ಪ್ರಬಂಧ ರಚನೆಯಂತಹ ಇನ್ನಿತರ ಸ್ಪರ್ಧೆಗಳನ್ನು ಏರ್ಪಡಿಸಬೇಕು ಎಂದು ಶಾಲೆಗಳಿಗೆ ನಿರ್ದೇಶನ ನೀಡಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News