ಬ್ರಹ್ಮ ಕುಮಾರೀಸ್ ಆಶ್ರಮದಲ್ಲಿ ಇಬ್ಬರು ಸಹೋದರಿಯರ ಆತ್ಮಹತ್ಯೆ ಪ್ರಕರಣ: ಮೂವರ ಬಂಧನ
ಆಗ್ರಾ: ಆಗ್ರಾ ಜಿಲ್ಲೆಯ ಜಗ್ನೇರ್ನಲ್ಲಿರುವ ಬ್ರಹ್ಮ ಕುಮಾರಿಸ್ ಆಶ್ರಮದ ಇಬ್ಬರು ಸಹೋದರಿಯರ ಆತ್ಮಹತ್ಯೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಸಹೋದರಿಯರಾದ ಏಕ್ಸಾ ಸಿಂಘಾಲ್ (38) ಹಾಗೂ ಸಿಖಾ ಸಿಂಘಾಲ್ (34) ಆಶ್ರಮದಲ್ಲಿ ಶುಕ್ರವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ನಲ್ಲಿ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ನಾಲ್ವರು ವ್ಯಕ್ತಿಗಳು ಕಾರಣ ಎಂದು ಹೇಳಿದ್ದಾರೆ. ಡೆತ್ ನೋಟ್ ನೊಂದಿಗೆ ಮೃತರ ಮೊಬೈಲ್ ಫೋನ್ಗಳನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಆಗ್ರಾ ಜಿಲ್ಲೆಯ ಜಗ್ನೇರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
‘‘ಬ್ರಹ್ಮ ಕುಮಾರಿಸ್ ಆಶ್ರಮಕ್ಕೆ ಸಂಬಂಧಿಸಿದ ಇಬ್ಬರು ಸಹೋದರಿಯರ ಆತ್ಮಹತ್ಯೆ ಕುರಿತು ಶುಕ್ರವಾರ ರಾತ್ರಿ ಪೊಲೀಸರು ಮಾಹಿತಿ ಸ್ವೀಕರಿಸಿದರು’’ ಖೆರಗಢದ ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ಅವರು ಹೇಳಿದ್ದಾರೆ.
ಈ ಇಬ್ಬರು ಸಹೋದರಿಯರು ಕಳೆದ ಕೆಲವು ವರ್ಷಗಳಿಂದ ಈ ಆಶ್ರಮದಲ್ಲಿ ವಾಸವಾಗಿದ್ದರು. ಡೆತ್ ನೋಟ್ನಲ್ಲಿ ಸಹೋದರಿಯರು ನೀರಜ್, ತಾರಾ ಚಂದ್, ಗುಡ್ಡನ್ ಹಾಗೂ ಪೂನಮ್ ತಮ್ಮನ್ನು ಆತ್ಮಹತ್ಯೆಗೆ ಪ್ರಚೋದಿಸಿದ್ದಾರೆ ಎಂದು ಆರೋಪಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
‘‘ನೀರಜ್ ಚಂದ್ ಈ ಸಹೋದರಿಯರ ಸೋದರ ಸಂಬಂಧಿ ಹಾಗೂ ತಾರಾ ಚಂದ್ ಮಾವ. ಪೂನಂ ಆಶ್ರಮದ ಸದಸ್ಯರು. ಗುಡ್ಡನ್ ಕೂಡ ಸಿಂಘಾಲ್ ಅವರ ಸಂಬಂಧಿ’’ ಎಂದು ಕುಮಾರ್ ಹೇಳಿದ್ದಾರೆ.
ಆರೋಪಿಗಳು ಸಂಘಟಿತರಾಗಿ ಜಗ್ನೇರ್ನಲ್ಲಿ ಈ ಆಶ್ರಮವನ್ನು ಆರಂಭಿಸಿದರು. ಅನಂತರ ಪೂನಂ ಹಾಗೂ ನೀರಜ್ ಅದರ ಗ್ವಾಲಿಯರ್ ಸೆಂಟರ್ಗೆ ತೆರಳಿದ್ದರು. ಸುಸೈಡ್ ನೋಟ್ ಪ್ರಕಾರ ವಿವಾದಕ್ಕೆ 25 ಲಕ್ಷ ರೂ. ಕಾರಣ ಎಂದು ಕುಮಾರ್ ತಿಳಿಸಿದ್ದಾರೆ
ತಾರಾ ಚಂದ್, ಗುಡ್ಡನ್ ಹಾಗೂ ಪೂನಂರನ್ನು ಬಂಧಿಸಲಾಗಿದೆ. ನೀರಜ್ ಸಿಂಘಾಲ್ ಬಂಧನಕ್ಕೆ ಶೋಧ ಕಾರ್ಯಾಚರಣೆ ಆರಂಭವಾಗಿದೆ.