ಜಾತ್ಯತೀತತೆಯನ್ನು ಯಾವಾಗಲೂ ಸಂವಿಧಾನದ ಭಾಗವೆಂದು ಪರಿಗಣಿಸಲಾಗಿದೆ : ಸುಪ್ರೀಂ ಕೋರ್ಟ್
ಹೊಸದಿಲ್ಲಿ : ಜಾತ್ಯತೀತತೆಯನ್ನು ಯಾವಾಗಲೂ ಸಂವಿಧಾನದ ಮೂಲರಚನೆಯ ಭಾಗವೆಂದು ಪರಿಗಣಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ.
ಸಂವಿಧಾನದ ಪೀಠಿಕೆಯಲ್ಲಿ ‘ಸಮಾಜವಾದಿ’ ಮತ್ತು ‘ಜಾತ್ಯತೀತ’ ಪದಗಳ ಸೇರ್ಪಡೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಸಂಜಯ್ ಕುಮಾರ್ ಅವರ ಪೀಠವು ಇದನ್ನು ಸ್ಪಷ್ಟಪಡಿಸಿತು.
ಈ ನ್ಯಾಯಾಲಯದ ಹಲವಾರು ತೀರ್ಪುಗಳು ಜಾತ್ಯತೀತತೆಯು ಸಂವಿಧಾನದ ಮೂಲರಚನೆಯ ಭಾಗವಾಗಿದೆ ಎನ್ನುವುದನ್ನು ಎತ್ತಿ ಹಿಡಿದಿವೆ. ಸಂವಿಧಾನದಲ್ಲಿ ಬಳಸಲಾಗಿರುವ ಸಮಾನತೆಯ ಹಕ್ಕು ಮತ್ತು ಭ್ರಾತೃತ್ವ ಪದಗಳನ್ನು ಹಾಗೂ ಭಾಗ IIIರಡಿ ಯ ಹಕ್ಕುಗಳನ್ನು ನೋಡಿದರೆ ಜಾತ್ಯತೀತತೆಯನ್ನು ಸಂವಿಧಾನದ ಪ್ರಮುಖ ಲಕ್ಷಣವಾಗಿ ಪರಿಗಣಿಸಲಾಗಿದೆ ಎನ್ನುವುದು ಸ್ಪಷ್ಟವಾಗಿದೆ ಎಂದು ಮೌಖಿಕವಾಗಿ ಹೇಳಿದ ನ್ಯಾ.ಖನ್ನಾ, ಫ್ರೆಂಚ್ ಮಾದರಿಯ ಜಾತ್ಯತೀತತೆಗಿಂತ ಭಿನ್ನವಾದ ಹೊಸ ಮಾದರಿಯನ್ನು ಭಾರತವು ಅಳವಡಿಸಿಕೊಂಡಿದೆ ಎಂದರು.
ಬಲರಾಮ್ ಸಿಂಗ್, ಹಿರಿಯ ಬಿಜೆಪಿ ನಾಯಕ ಡಾ.ಸುಬ್ರಮಣಿಯನ್ ಸ್ವಾಮಿ ಮತ್ತು ವಕೀಲ ಅಶ್ವಿನಿಕುಮಾರ್ ಉಪಾಧ್ಯಾಯ್ ಅವರು ಈ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ವಿಚಾರಣೆಯ ವೇಳೆ ನ್ಯಾ.ಖನ್ನಾ ಅವರು, ಭಾರತವು ಜಾತ್ಯತೀತವಾಗಿರಬೇಕು ಎಂದು ನೀವು ಬಯಸುವುದಿಲ್ಲವೇ ಎಂದು ಪ್ರಶ್ನಿಸಿದಾಗ ಅರ್ಜಿದಾರ ಬಲರಾಮ್ ಸಿಂಗ್ ಪರ ವಕೀಲ ವಿಷ್ಣು ಶಂಕರ್ಜೈನ್ ಅವರು,‘ಭಾರತವು ಜಾತ್ಯತೀತವಲ್ಲ ಎಂದು ನಾವು ಹೇಳುತ್ತಿಲ್ಲ. ನಾವು ಈ ತಿದ್ದುಪಡಿಯನ್ನು ಪ್ರಶ್ನಿಸುತ್ತಿದ್ದೇವೆ’ ಎಂದು ಉತ್ತರಿಸಿದರು. ‘ಸಮಾಜವಾದ’ಪದದ ಸೇರ್ಪಡೆಯು ವೈಯಕ್ತಿಕ ಸ್ವಾತಂತ್ರ್ಯವನ್ನು ಮೊಟಕುಗೊಳಿಸಿತ್ತದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಖನ್ನಾ, ಸಮಾಜವಾದವು ಸಮಾನ ಅವಕಾಶಗಳಿರಬೇಕು ಮತ್ತು ದೇಶದ ಸಂಪತ್ತು ಸಮಾನವಾಗಿ ಹಂಚಿಕೆಯಾಗಬೇಕು ಎಂಬ ಅರ್ಥವನ್ನೂ ನೀಡುತ್ತದೆ. ನಾವು ಪಾಶ್ಚಾತ್ಯ ಅರ್ಥವನ್ನು ತೆಗೆದುಕೊಳ್ಳುವುದು ಬೇಡ ಎಂದರು.
ಇದೇ ವೇಳೆ ವಕೀಲ ಅಶ್ವಿನಿಕುಮಾರ್ ಉಪಾಧ್ಯಾಯ್ ಅವರು, ಭಾರತವು ಅನಾದಿ ಕಾಲದಿಂದಲೂ ಜಾತ್ಯತೀತವಾಗಿದೆ ಎಂದು ಪ್ರತಿಪಾದಿಸಿದರು.
ಸಂವಿಧಾನದ ಪೀಠಿಕೆಯನ್ನು 1949, ನ.26ರಂದು ಘೋಷಿಸಲಾಗಿತ್ತು,ಆದ್ದರಿಂದ ನಂತರದ ತಿದ್ದುಪಡಿಯ ಮೂಲಕ ಅದಕ್ಕೆ ಹೆಚ್ಚಿನ ಪದಗಳನ್ನು ಸೇರಿಸಿದ್ದು ನಿರಂಕುಶವಾಗಿದೆ ಎಂದು ಹೇಳಿದ ಸುಬ್ರಮಣಿಯನ್ ಸ್ವಾಮಿ, ಪ್ರಸ್ತುತ ಪೀಠಿಕೆಯ ಪ್ರಕಾರ ಭಾರತವನ್ನು ಸಮಾಜವಾದಿ ಮತ್ತು ಜಾತ್ಯತೀತ ಗಣರಾಜ್ಯವನ್ನಾಗಿಸಲು ಜನರು 1949,ನ.26ರಂದು ಒಪ್ಪಿಕೊಂಡಿದ್ದರು ಎಂದು ಬಿಂಬಿಸುವುದು ತಪ್ಪಾಗುತ್ತದೆ ಎಂದು ವಾದಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ.ಖನ್ನಾ, ತಿದ್ದುಪಡಿಯ ಮೂಲಕ ಸೇರಿಸಲಾದ ಪದಗಳನ್ನು ಆವರಣಗಳಿಂದ ಪ್ರತ್ಯೇಕವಾಗಿ ಗುರುತಿಸಲಾಗಿದೆ. ಹೀಗಾಗಿ ಅವುಗಳನ್ನು 1976ರ ತಿದ್ದುಪಡಿಯ ಮೂಲಕ ಸೇರಿಸಲಾಗಿದೆ ಎನ್ನುವುದು ಎಲ್ಲರಿಗೂ ಸ್ಪಷ್ಟವಾಗಿದೆ ಎಂದು ತಿಳಿಸಿದರು. ದೇಶದ ‘ಏಕತೆ’’ಮತ್ತು ‘ಸಮಗ್ರತೆ’ಯಂತಹ ಶಬ್ದಗಳನ್ನೂ ತಿದ್ದುಪಡಿಯ ಮೂಲಕ ಸೇರಿಸಲಾಗಿದೆ ಎಂದು ಹೇಳಿದರು.
ಇಂತಹ ತಿದ್ದುಪಡಿಯನ್ನು ಅನುಮೋದಿಸಿದರೆ ಭವಿಷ್ಯದಲ್ಲಿ ಪ್ರಜಾಸತ್ತಾತ್ಮಕದಂತಹ ಪದಗಳನ್ನು ತೆಗೆದುಹಾಕಲು ಪೀಠಿಕೆಯನ್ನುತಿದ್ದುಪಡಿ ಮಾಡಬಹುದು ಎಂದು ಉಪಾಧ್ಯಾಯ್ ವಾದಿಸಿದರು.
ಅಂತಿಮವಾಗಿ ವಿಷಯವನ್ನು ನ.18ರಂದು ಆರಂಭವಾಗುವ ವಾರದಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗಿದೆ.