ಬುಲ್ಡೋಜರ್ ಕ್ರಮದ ವಿರುದ್ಧ ಉತ್ತರ ಪ್ರದೇಶ ಸರಕಾರಕ್ಕೆ ಸುಪ್ರೀಂ ಕೋರ್ಟ್ ಎಚ್ಚರಿಕೆ

Update: 2024-10-22 10:56 GMT

ಆದಿತ್ಯನಾಥ್ | PC : PTI 

ಹೊಸದಿಲ್ಲಿ: ಉತ್ತರ ಪ್ರದೇಶದ ಬಹರೈಚ್‌ನಲ್ಲಿ ಕೋಮು ಘರ್ಷಣೆಯ ಬಳಿಕ ಜಾರಿಗೊಳಿಸಲಾಗಿರುವ ಕಟ್ಟಡ ನೆಲಸಮ ನೋಟಿಸ್‌ಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಮಂಗಳವಾರ ಕೈಗೆತ್ತಿಕೊಂಡಿದ್ದ ಸರ್ವೋಚ್ಚ ನ್ಯಾಯಾಲಯವು, ಯಾವುದೇ ಬುಲ್ಡೋಜರ್ ಕ್ರಮದ ವಿರುದ್ಧ ಆದಿತ್ಯನಾಥ್ ಸರಕಾರಕ್ಕೆ ಪರೋಕ್ಷ ಎಚ್ಚರಿಕೆ ನೀಡಿದೆ. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿ ಅಪಾಯವನ್ನು ಎದುರು ಹಾಕಿಕೊಳ್ಳಲು ಸರಕಾರವು ಬಯಸಿದರೆ ಅದು ಅದರ ಆಯ್ಕೆ ಎಂದು ಹೇಳಿರುವ ನ್ಯಾಯಾಲಯವು,‌ ಆದರೆ ‘ಬುಲ್ಡೋಜರ್ ನ್ಯಾಯ’ ಪ್ರಕರಣದಲ್ಲಿ ತನ್ನ ಆದೇಶಗಳು ನೆಲಸಮವನ್ನು ಎದುರಿಸುತ್ತಿರುವ ಕಟ್ಟಡಗಳು ಅಕ್ರಮವಾಗಿದ್ದರೆ ತಾನು ಮಧ್ಯಪ್ರವೇಶಿಸುವುದಿಲ್ಲ ಎನ್ನುವುದನ್ನು ನಿರ್ದಿಷ್ಟಪಡಿಸಿದೆ ಎಂದು ತಿಳಿಸಿದೆ.

ನ್ಯಾಯಮೂರ್ತಿಗಳಾದ ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠವು ಬುಧವಾರ ಮುಂದಿನ ವಿಚಾರಣೆಯವರೆಗೆ ಯಾವುದೇ ಕ್ರಮವನ್ನು ತೆಗೆದುಕೊಳ್ಳದಂತೆ ಉತ್ತರ ಪ್ರದೇಶ ಸರಕಾರಕ್ಕೆ ಸೂಚಿಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಸಿ.ಯು.ಸಿಂಗ್ ಅವರು,ಅ.13ರ ಹಿಂಸಾಚಾರದ ಬಳಿಕ ಸ್ಥಳೀಯ ಅಧಿಕಾರಿಗಳು ನೆಲಸಮ ನೋಟಿಸ್‌ಗಳನ್ನು ಹೊರಡಿಸಿದ್ದು,ಮೂರು ದಿನಗಳಲ್ಲಿ ಉತ್ತರಿಸುವಂತೆ ಸೂಚಿಸಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು. ಹಿಂಸಾಚಾರದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದ.

‘ನಂ.1 ಅರ್ಜಿದಾರರ ತಂದೆ ಮತ್ತು ಸೋದರರು ಶರಣಾಗಿದ್ದಾರೆ. ನೋಟಿಸ್‌ನ್ನು ಅ.17ರಂದು ಹೊರಡಿಸಲಾಗಿದೆ,ಆದರೆ 18ರ ಸಂಜೆ ಅವುಗಳನ್ನು ಉದ್ದೇಶಿತ ಕಟ್ಟಡಗಳಿಗೆ ಅಂಟಿಸಲಾಗಿದೆ. ನಾವು ರವಿವಾರವೇ ವಿಚಾರಣೆಯನ್ನು ಬಯಸಿದ್ದೆವು,ಆದರೆ ಅದು ಆಗಲಿಲ್ಲ. ಕೆಲವರು ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಿದ್ದರು ’ಎಂದರು.

ಈ ಹಿಂದೆ ಅಲಹಾಬಾದ್ ಉಚ್ಚ ನ್ಯಾಯಾಲಯವು ನೆಲಸಮ ನೋಟಿಸ್‌ಗಳಿಗೆ ಉತ್ತರಿಸಲು ಗಡುವನ್ನು 15 ದಿನಗಳಿಗೆ ವಿಸ್ತರಿಸಿತ್ತು ಮತ್ತು ಉತ್ತರಗಳನ್ನು ಪರಿಶೀಲಿಸಿದ ಬಳಿಕ ನಿರ್ಧರಿಸುವಂತೆ ರಾಜ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಮಂಗಳವಾರ ಉತ್ತರ ಪ್ರದೇಶ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ ಅವರು, ನಾಳೆಯವರೆಗೂ ಯಾವುದೇ ಕ್ರಮವನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು.

‘ಅವರು (ಉತ್ತರ ಪ್ರದೇಶ ಅಧಿಕಾರಿಗಳು) ನಮ್ಮ ಆದೇಶವನ್ನು ಉಲ್ಲಂಘಿಸುವ ಅಪಾಯವನ್ನು ಎದುರು ಹಾಕಿಕೊಳ್ಳಲು ಬಯಸಿದರೆ ಅದು ಅವರ ಆಯ್ಕೆ’ ಎಂದು ನ್ಯಾ.ಗವಾಯಿ ಹೇಳಿದರೆ, ಉಚ್ಚ ನ್ಯಾಯಾಲಯವು ನೆಲಸಮ ನೋಟಿಸ್‌ಗಳಿಗೆ ಉತ್ತರಗಳನ್ನು ಸಲ್ಲಿಸಲು 15 ದಿನಗಳ ಸಮಯಾವಕಾಶ ನೀಡಿದೆ ಎಂದು ನ್ಯಾ.ವಿಶ್ವನಾಥನ್ ಹೇಳಿದರು. ಆದರೆ ಅರ್ಜಿದಾರರಿಗೆ ಯಾವುದೇ ರಕ್ಷಣೆಯನ್ನು ಒದಗಿಸಲಾಗಿಲ್ಲ ಎಂದು ಸಿಂಗ್ ತಿಳಿಸಿದರು.

ಸರ್ವೋಚ್ಚ ನ್ಯಾಯಾಲಯವು ಪ್ರಸ್ತುತ‘ಬುಲ್ಡೋಜರ್ ನ್ಯಾಯ’ದ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ನಡೆಸುತ್ತಿದೆ.

ಅಪರಾಧದ ಆರೋಪಿ ಎನ್ನುವುದು ಆಸ್ತಿ ನೆಲಸಮಕ್ಕೆ ಆಧಾರವಾಗಿರಲು ಸಾಧ್ಯವಿಲ್ಲ,ನಾಗರಿಕ ನಿಯಮಗಳ ಉಲ್ಲಂಘನೆಯಾಗಿದ್ದರೆ ಮಾತ್ರ ಇಂತಹ ಕ್ರಮ ನಡೆಸಬಹುದು ಎಂದು ಈಗಾಗಲೇ ಸ್ಪಷ್ಟಪಡಿಸಿರುವ ಸರ್ವೋಚ್ಚ ನ್ಯಾಯಾಲಯವು,ತನ್ನ ಅನುಮತಿಯಿಲ್ಲದೆ ನೆಲಸಮ ಕಾರ್ಯಾಚರಣೆಗಳನ್ನು ನಡೆಸುವಂತಿಲ್ಲ ಎಂದು ತಾಕೀತು ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News